ಗುಂಡ್ಲುಪೇಟೆ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಸವರಾಜ ತಳವಾರ್ ಉದ್ಘಾಟಿಸಿದರು. ಎಂ.ಟಿ.ದೀಪು, ಗಿರೀಶ್ ಇತರರು ಇದ್ದರು. 
ರಾಜ್ಯ

ಮಾತೃ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಿ

ಗುಂಡ್ಲುಪೇಟೆ: ಪ್ರತಿಯೊಬ್ಬರೂ ತಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ತಳವಾರ್ ಹೇಳಿದರು.
ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಮಾತೃಭಾಷೆಯ ಮೇಲಿನ ಅಭಿಮಾನವು ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಆದ್ದರಿಂದ ನಾವು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗಡಿನಾಡಾದ ಗುಂಡ್ಲುಪೇಟೆಯಂತಹ ಸಣ್ಣ ಪಟ್ಟಣಗಳಲ್ಲಿ ಪರಭಾಷಿಕರ ಸಂಖ್ಯೆ ಸಹಜವಾಗಿ ಹೆಚ್ಚಾಗುತ್ತದೆ. ಆದರೆ ನಾವು ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ನಮ್ಮ ಮಾತೃಭಾಷೆ ಮತ್ತಷ್ಟು ಎತ್ತರಕ್ಕೆ ಏರುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಟಿ.ದೀಪು ಮಾತನಾಡಿ, ಪರಭಾಷೆಯ ಮೇಲಿನ ಮೋಹ ಕಡಿಮೆಯಾದಾಗ ಮಾತ್ರ ನಮ್ಮ ಭಾಷೆಯ ಮೇಲಿನ ಅಭಿಮಾನ ಹೆಚ್ಚುತ್ತದೆ ಎಂದರು. ಬಳಿಕ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಯನ್ನು ಹಾಡಿ ರಂಜಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಿರೀಶ್ ಅವರು ‘ಬೇಡುವೆನು ವರವನ್ನು..’ ಗೀತೆಯನ್ನು ಮತ್ತು ವೃತ್ತ ನಿರೀಕ್ಷಕ ಜಯಕುಮಾರ್ ‘ಕನ್ನಡವೇ ನಮ್ಮಮ್ಮ..‘ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಶಬ್ಬೀರಾಲಿ, ರಾಘವೇಂದ್ರ , ವಕೀಲ ಮನುಶ್ಯಾನು ಭೋಗ್ ಇದ್ದರು.