ಹನೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ವಿದ್ಯಾರ್ಥಿಗಳಿಂದ ಅಹವಾಲು ಸ್ವೀಕರಿಸಿದರು. ಮಹೇಶ್, ವೆಂಕಟೇಶ್, ಮಧುಸೂದನ್, ಸಿದ್ದರಾಜು, ಅಶೋಕ್ ಇತರರಿದ್ದರು.  
ರಾಜ್ಯ

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ವಸಂತಕುಮಾರ್ ಬಿ
ಹನೂರು: ಪ್ರತಿಯೊಬ್ಬರೂ ಓದಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಶೈಕ್ಷಣಿಕ ಪ್ರಗತಿಯತ್ತ ಗಮನ ನೀಡಬೇಕು. ಹಕ್ಕುಗಳನ್ನು ಪಡೆಯಲು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕ ಮಕ್ಕಳಿಗೆ ಹಕ್ಕುಗಳನ್ನು ನೀಡಿದೆ. ಆದರೆ ಹಕ್ಕುಗಳನ್ನು ಪರಿಪೂರ್ಣವಾಗಿ ನೀಡುವಲ್ಲಿ ತಳಮಟ್ಟದಲ್ಲಿ ಹೊಣೆಗಾರಿಕೆ ಹೊತ್ತವರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಹದಿಹರೆಯದ ಮಕ್ಕಳು ಸಿಗಬೇಕಾದ ಹಕ್ಕುಗಳಿಂದ ವಂಚಿತರಾಗಿದ್ದು, ಸಂಕಷ್ಟಕ್ಕೆ ಸಿಲುಕಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಹಕ್ಕುಗಳನ್ನು ಪಡೆಯಲು ಪ್ರತಿಯೊಬ್ಬರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಆದರೆ ಕೆಲವು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ಈ ನೀತಿಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲು ಆಯೋಗದಿಂದ ಚಿಂತನೆ ನಡೆಸಲಾಗುತ್ತಿದೆ. ಇತ್ತ ಈ ಹಿಂದೆ ಚಾ.ನಗರ ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗಿತ್ತು. ಆದರೀಗ ಕಡಿಮೆಯಾಗುವುದರತ್ತ ಸಾಗಿದೆ. ಹಾಗಾಗಿ ಈ ಸಂಬಂಧ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಜನವರಿಯೊಳಗೆ ಚಾ.ನಗರವನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿ ಘೋಷಿಸಲು ಆಯೋಗ ತೀರ್ಮಾನಿಸಿದೆ ಎಂದು ತಿಳಿಸಿದರು.
ಬಿಇಒ ಮಹೇಶ್ ಮಾತನಾಡಿ, ಮಕ್ಕಳಿಗೆ ಸಂವಿಧಾನ ಬದ್ಧವಾಗಿ ಹಕ್ಕುಗಳನ್ನು ನೀಡಿದ್ದು, ಒದಗಿಸುವಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಕ್ಕುಗಳಿಗೆ ಚ್ಯುತಿಯಾದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ಬಳಿಕ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸಲ್ಲಿಸಿದ ಆಹವಾಲಿಗೆ ಸಂಬಂಧಿಸಿದಂತೆ ಆಯೋಗದ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸದಸ್ಯ ವೆಂಕಟೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ರವೀಂದ್ರ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಶಿವಮಲ್ಲು, ವಿವೇಕಾನಂದ ಸಂಸ್ಥೆ ಪ್ರಾಂಶುಪಾಲ ಮಧುಸೂದನ್, ಮುಖ್ಯ ಶಿಕ್ಷಕಿ ಸತ್ಯಪ್ರಿಯಾ, ಎಎಸ್‌ಐ ಮಹೇಶ್‌ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಸಿದ್ದರಾಜು ಇತರರು ಇದ್ದರು.