Detect the disease before the disease progresses
ಶಿರಾ: ಗ್ರಾಮೀಣ ಭಾಗದ ಜನರು ಹಣದ ಕೊರತೆ ಮತ್ತು ನಗರಕ್ಕೆ ಹೋಗಲು ಸಾಧ್ಯವಾಗದೆ ಕಾಯಿಲೆ ಉಲ್ಬಣ ಮಾಡಿಕೊಳ್ಳುತ್ತಾರೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್ ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದ ವೆಲ್ನೆಸ್ ಆನ್ವೀಲ್ ಸಂಚಾರಿ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದ ವೆಲ್ನೆಸ್ ಆನ್ ವೀಲ್ ಸಂಚಾರಿ ವಾಹನ ನೇರವಾಗಿ ಹಳ್ಳಿಗಳಿಗೆ ಹೋಗುವುದರಿಂದ ಮುಂಚಿತವಾಗಿಯೇ ರೋಗ ಪತ್ತೆಯಾಗುತ್ತದೆ. ಹೃದಯಾಘಾತ ಮತ್ತು ಕ್ಯಾನ್ಸರ್ನಿಂದ ಆಗುವ ಸಾವಿನ ಪ್ರಮಾಣವನ್ನು ತಗ್ಗಿಸುವುದು ನಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ನಾರಾಯಣ ಹೆಲ್ತ್ ಕ್ಯಾಂಪ್ ಮ್ಯಾನೇಜರ್ ದೇವರಾಜ ನಾಯಕ್ ಮಾತನಾಡಿ, ತಾಲೂಕುಮಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ಸಮಗ್ರ ತಪಾಸಣಾ ಸೇವೆ ಆರಂಭಿಸಿದ್ದೇವೆ. ಈಗಾಗಲೇ 9 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಶಿರಾ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರ ಮೂಲಕ 30 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಕ್ಯಾಂಪ್ಗೆ ಕರೆತರಲಾಗುವುದು. ಪರೀಕ್ಷೆಯಲ್ಲಿ ಸಮಸ್ಯೆ ಕಂಡು ಬಂದರೆ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಮೊಬೈಲ್ ಘಟಕದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ಗೆ ಸಂಬಂಧಿಸಿದ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಡಿಜಿಟಲ್ ಎಕ್ಸ್ರೇ, ಇಸಿಜಿ, 2ಡಿ ಎಕೋ, ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್, ಗರ್ಭಕಂಠ ಕ್ಯಾನ್ಸರ್ ತಪಾಸಣೆ, ಮಧುಮೇಹ, ರಕ್ತದೊತ್ತಡ ಸೇರಿ 25ಕ್ಕೂ ಹೆಚ್ಚು ರಕ್ತ ಪರೀಕ್ಷೆ ಲಭ್ಯವಿವೆ ಎಂದರು.
ಈ ಸಂಚಾರಿ ಘಟಕ ಮುಂದಿನ ದಿನಗಳಲ್ಲಿ ಶಿರಾ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಸಂಚರಿಸಲಿದೆ. ದಿನವೊಂದಕ್ಕೆ 80ರಿಂದ 100 ಜನರಿಗೆ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಸೇವೆ ಲಭ್ಯವಿದೆ. ಆಧಾರ್ ಕಾರ್ಡ್ ಕಡ್ಡಾಯ ಎಂದು ತಿಳಿಸಿದರು.