ಉಡುಪಿಯಲ್ಲಿ ಅತಿ ಹೆಚ್ಚು 2,059 ಮಿಮೀ ಮಳೆ  
ರಾಜ್ಯ

ಬರದ ನಡುವೆಯೂ ಉಡುಪಿಯಲ್ಲಿ 2,059 ಮಿಮೀ ಮಳೆ: ಘಟ್ಟಪ್ರದೇಶಗಳ ಬರದ ಛಾಯೆ ತುಸು ದೂರ- Udupi receives 2,059 mm of rain

ಬೆಂಗಳೂರು: ಬರದ ನಡುವೆಯೂ ರಾಜ್ಯದ ಇತರ ಜಿಲ್ಲೆಗಳಕ್ಕಿಂತ ಉಡುಪಿಯಲ್ಲಿ ಅತಿ ಹೆಚ್ಚು 2,059 ಮಿಮೀ ಮಳೆ ಸುರಿದಿದೆ.

ಜೂ.1ರಿಂದ ಆ.8ವರೆಗೆ ವಾಡಿಕೆಯಂತೆ 2,879 ಮಿಮೀ ಮಳೆಯಾಗಬೇಕಿತ್ತು. ಶೇ.28 ಮಳೆ ಅಭಾವವಾಗಿದ್ದರೂ ಎರಡು ವಾರಗಳಿಂದ ವಾಡಿಕೆಗಿಂತ ಅಧಿಕ ಮಳೆ ಸುರಿದ ಪರಿಣಾಮ ಆ ಜಿಲ್ಲೆಯಲ್ಲಿ ಒಟ್ಟು ಮಳೆ ಕೊರತೆಯ ಶೇಕಡ ಪ್ರಮಾಣವನ್ನು ತುಸು ತಗ್ಗಿದೆ. ದಕ್ಷಿಣ ಕನ್ನಡ 1,836, ಉತ್ತರ ಕನ್ನಡ 1,602, ಕೊಡಗು 1,045, ಶಿವಮೊಗ್ಗ 961, ಚಿಕ್ಕಮಗಳೂರು 696, ಹಾಸನ 346 ಮಿಮೀ ವರ್ಷಧಾರೆಯಾಗಿದೆ.
ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ತುಸು ಕಡಿಮೆ ಮಳೆ ಸುರಿದಿದ್ದರೂ ಘಟ್ಟಪ್ರದೇಶಗಳ ರೈತರಿಗೆ ಬರದ ಛಾಯೆಯ ಚಿಂತೆಯನ್ನು ದೂರ ಮಾಡಿದೆ. ಆದರೆ, ದಕ್ಷಿಣ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳು ಮಳೆ ಅಭಾವ ಎದುರಿಸುತ್ತಿವೆ.
ತಗ್ಗಿದ ಮಳೆ:ಹಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಸುರಿಯುತ್ತಿದ್ದ ಮಳೆ ತಗ್ಗಿದ್ದರೆ ಉಳಿದೆಡೆ ಲಘು ಪ್ರಮಾಣದಲ್ಲಿ ಬೀಳುತ್ತಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಕೆಲವು ಭಾಗಗಳಲ್ಲಿ ಭಾನುವಾರ ಕೆಲ ಕಾಲ ಮಳೆ ಸುರಿಯಿತು.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು. ಕೋಲಾರ, ಚಿತ್ರದುರ್ಗ, ಬೆಳಗಾವಿ ಮತ್ತು ವಿಜಯಪುರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ತೀರದ ಪ್ರದೇಶಗಳಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.