basavaraja horatti 
ರಾಜ್ಯ

ಶಾಸಕರುಗಳ ಕರೆ ಸ್ವೀಕರಿಸದಿದ್ದರೂ ಹಕ್ಕುಚ್ಯುತಿ

ಪ್ರಮುಖ ಮುಖ್ಯಾಂಶಗಳು

  • *ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಹೊರಟ್ಟಿ
  • *ಹಕ್ಕು ಬಾದ್ಯತಾ ಸಮಿತಿಗೆ ವಹಿಸುವುದು ಅನಿವಾರ್ಯ
  • *ಹಲವು ಶಾಸಕರುಗಳ ದೂರಿನ ಹಿನ್ನೆಲೆಯಲ್ಲಿ ಕ್ರಮ
ಬೆಂಗಳೂರು:
ಶಾಸಕರುಗಳ ಪೋನ್ ಕರೆಯನ್ನು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಸ್ವೀಕರಿಸದೆ ಇರುವುದು ಕೂಡ
ಶಾಸಕರುಗಳ ಹಕ್ಕುಚ್ಯುತಿ ವಾಪ್ತಿಗೆ ಒಳಪಡುತ್ತದೆ. ಕರೆ ಸ್ವೀಕರಿಸದಿದ್ದರೆ ಅನಿವಾರ್ಯವಾಗಿ ಹಕ್ಕು ಬಾದ್ಯತಾ ಸಮಿತಿಗೆ ವಹಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ವಿಧಾನ ಪರಿಷತ್ತಿನ ಶಾಸಕರುಗಳು ಸಾರ್ವಜನಿಕ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕರ ಪರವಾಗಿ ಹಲವು ಕುಂದುಕೊರತೆಗಳನ್ನು ಚರ್ಚಿಸಲು ಕೆಲವೊಮ್ಮೆ ತುರ್ತಾಗಿ ದೂರವಾಣಿ ಮೂಲಕ ಸಂಪರ್ಕಿಸಿದರು ಕೆಲವು ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದಾರೆ.
ಒಂದು ವೇಳೆ ಅಧಿಕಾರಿಗಳು ಆ ಸಮಯದಲ್ಲಿ ಬೇರೆ ತುರ್ತು ಕೆಲಸದಲ್ಲಿ ಇದ್ದಲ್ಲಿ ಸೌಜನ್ಯಕ್ಕಾದರು ಮರು ದೂರವಾಣಿ ಕರೆ ಮಾಡುವಂತಹ ಪದ್ದತಿ ಹೊಂದಿರುವುದಿಲ್ಲ ಎಂದು ಮಾನ್ಯ ಶಾಸಕರುಗಳು ಮೌಖಿಕವಾಗಿ ದೂರು ಸಲ್ಲಿಸಿರುವುದನ್ನು ಅವರ ಗಮನಕ್ಕೆ ತಂದಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆಗಳನ್ನು ಮತ್ತು ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸುವ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕರೆ ಸ್ವೀಕರಿಸದೇ ಇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸೌಜನ್ಯಕ್ಕಾದರೂ ಮರು ದೂರವಾಣಿ ಕರೆ ಮಾಡದೇ ಇರುವ ಅಧಿಕಾರಿಗಳ ನಡೆಯು ಶಾಸಕರುಗಳಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡುವುದರ ಜೊತೆಗೆ ಆಡಳಿತ ಯಂತ್ರದ ಮೇಲೆ ವಿಶ್ವಾಸಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇರುತ್ತದೆ ಮತ್ತು ಇದು ಸಂವಿಧಾನ ಪ್ರದತ್ತವಾದ ಶಾಸಕರುಗಳ ಹಕ್ಕುಚ್ಯುತಿ ವಾಪ್ತಿಗೆ ಒಳಪಡುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸೇವೆಯೆ ಸರ್ಕಾರದ ಪ್ರಮುಖ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ ಕೆಲವು ಅಧಿಕಾರಿಗಳ ಈ ನಡೆಯು ಪ್ರಶ್ನಾರ್ಹವಾಗಿದೆ. ಅಧಿಕಾರಿಗಳ ಈ ವರ್ತನೆಯು ಜನಪ್ರತಿನಿಧಿಗಳಿಗೆ ಹೀಗಾದರೆ ಸಾರ್ವಜನಿಕರ ಗತಿಯೇನು ಎನ್ನುವಂತಹ ಪ್ರಶ್ನೆ ಉದ್ಭವಾಗುತ್ತದೆ. ಆದುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಗೆ ಸಮಯೋಚಿತ ಹಾಗೂ ಸಮರ್ಪಕ ಸ್ಪಂದನೆ ಕೊಡುವಂತೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

* ಶಾಸಕರುಗಳ ಕರೆಯನ್ನು ಸ್ವೀಕಾರ ಮಾಡದೆ ಇದ್ದರೆ, ಅದು ಕೂಡ ಹಕ್ಕು ಚ್ಯುತಿ ಆಗಲಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಲಾಗಿದೆ.

-ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್