ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ರಾಜ್ಯ

Democracy is a victim of money power

ಮುಧೋಳ: ಚುನಾವಣೆಯಲ್ಲಿ ಹಣ ನೀಡಿ ಮತ ಪಡೆಯುವ ಸಂಸ್ಕೃತಿ ಪ್ರಜಾಪ್ರಭುತ್ವದ ಅಧಃಪತನಕ್ಕೆ ನಾಂದಿಯಾಗುತ್ತಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯು ಗುಣಮಟ್ಟದ ಬದಲು ಅನಗತ್ಯ ವಿವಾದಗಳ ಕೇಂದ್ರವಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದರು.
ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದರು.
ಇಂದು ಶಾಲೆಗಳು ಜ್ಞಾನ ದೇಗುಲಗಳಾಗುವ ಬದಲು ಹಿಜಾಬ್, ಜನಿವಾರ, ಕುಂಕುಮದAತಹ ಅನಗತ್ಯ ವಿವಾದಗಳ ಕೇಂದ್ರವಾಗುತ್ತಿವೆ. ಸರ್ಕಾರಗಳು ಇಂತಹ ಭಾವನಾತ್ಮಕ ವಿಷಯಗಳಿಗೆ ನೀಡುವ ಆದ್ಯತೆಯನ್ನು ಶಿಕ್ಷಣದ ಗುಣಮಟ್ಟಕ್ಕೆ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಇಬ್ಬರೇ ದೈಹಿಕ ಶಿಕ್ಷಕರಿದ್ದಾರೆ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ತಾಯ್ನುಡಿ ಕನ್ನಡ ಪತ್ರಿಕೆಯಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಶೋಚನೀಯ. ೮೦ ಅಂಕಗಳ ಪರೀಕ್ಷೆಯಲ್ಲಿ ಕೇವಲ ೧೩ ಅಂಕ ಪಡೆದವರನ್ನು ಪಾಸ್ ಮಾಡುವ ಇಂದಿನ ಸಿಸ್ಟಮ್‌ನಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಕರಿಲ್ಲದ ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.
ಹಣ ನೀಡಿ ಮತ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಪವಿತ್ರತೆಯನ್ನು ಹಾಳುಮಾಡುತ್ತಿದೆ. ಜನರು ಮತ್ತು ರಾಜಕಾರಣಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ವ್ಯವಸ್ಥೆ ಬುಡಮೇಲಾಗುವುದು ಖಚಿತ ಎಂದು ಎಚ್ಚರಿಸಿದರು.
ಹಿಂದಿನ ಸರ್ಕಾರಗಳಲ್ಲಿ ಶಿಕ್ಷಣಕ್ಕೆ ಸಿಗುತ್ತಿದ್ದ ಮಹತ್ವ ಈಗ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಸರ್ಕಾರ ಶಿಕ್ಷಕರ ನೇಮಕಾತಿ ಮತ್ತು ಮೂಲಸೌಕರ್ಯದತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.