ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್‌ನಲ್ಲಿ ರೈತರಿಗೆ ಬೆಳೆಸಾಲವನ್ನು ಶೂನ್ಯ ಬಡ್ಡಿದರಲ್ಲಿ 5 ಲಕ್ಷ ರೂ. ವರೆಗೂ ನೀಡಬೇಕೆಂದು ರೈತ ಮುಖಂಡರಾದ ಪರಶುರಾಮ ಮಂಟೂರ,ಯಲ್ಲಪ್ಪ ಹೆಗಡೆ ಸದಾಶಿವ ಹಾರೋಜಿ, ಹುಸೇನಸಾಬ ಮಾಲದಾರ, ಭೀಮಣ್ಣ ಬಸರಿಕಟ್ಟಿ, ಗೋವಿಂದಪ್ಪ ಬೆಳಗಂಟಿ ಆಗ್ರಹಿಸಿದರು.
- ರೈತ ಮುಖಂಡ ಯಲ್ಲಪ್ಪ ಹೆಗಡೆ ಆಗ್ರಹ
- ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್
ಬಾಗಲಕೋಟೆ: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ರವರೆಗೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳೆ ಸಾಲ ನೀಡಬೇಕು. ಅಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ಬಗ್ಗೆ ತನಿಖೆ ನಡೆಸಿ, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆ. 21ರಂದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ಪರಶುರಾಮ ಮಂಟೂರ, ಯಲ್ಲಪ್ಪ ಹೆಗಡೆ ಜಂಟಿಯಾಗಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಆದರೆ, ಬಹುತೇಕ ರೈತರಿಗೆ ಸಾಲ ನೀಡುತ್ತಿಲ್ಲ. ಕೇವಲ 50 ಸಾವಿರ ರೂ. ಮಾತ್ರ ಸಾಲ ನೀಡುತ್ತಿದೆ ಎಂದು ದೂರಿದರು.
ಯಲ್ಲಪ್ಪ ಹೆಗಡೆ ಮಾತನಾಡಿ, ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಹಣದ ಅವ್ಯವಹಾರ ನಡೆದಿದೆ. ಹಲವು ಪಿಕೆಪಿಎಸ್‌ಗಳಲ್ಲಿಯೂ ಹಣದ ಅವ್ಯವಹಾರ ಆಗಿದೆ. ಬ್ಯಾಂಕಿನ ಕೆಲ ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮಿಲು ಆಗಿರುವ ಅನುಮಾನ ಇದ್ದು, ಇಂತಹ ಪ್ರಕರಣಗಳ ವಿರುದ್ಧ ಸಮಗ್ರ, ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಎಂದು ಆಗ್ರಹಿಸಿದರು.
ಬ್ಯಾಂಕಿನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ, ದುರಾಡಳಿತ ಹಾಗೂ ಹಣಕಾಸಿನ ಅಕ್ರಮಗಳಿಗೆ ಕಡಿವಾಣ ಹಾಕಿ, ಬ್ಯಾಂಕಿನ ಆಡಳಿತ ಶುದ್ಧೀಕರಿಸಬೇಕು. ಬ್ಯಾಂಕ್ ಶುದ್ಧೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಸದಾಶಿವ ಹಾರೋಜಿ, ಹುಸೇನಸಾಬ ಮಾಲದಾರ, ಭೀಮಣ್ಣ ಬಸರಿಕಟ್ಟಿ, ಗೋವಿಂದಪ್ಪ ಬೆಳಗಂಟಿ, ಶೇಖರ ಕುಂದರಗಿ ಇದ್ದರು.