ಆಲಮಟ್ಟಿಯ ಮುಖ್ಯ ಇಂಜಿನಿಯರ್ ಕಚೇರಿ ಎದುರು ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬರುವ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ 36 ಕೆರೆಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಪ್ರತಿಭಟಿಸಿ, ಮನವಿ ಸಲ್ಲಿಸಿದರು. ಶಾಂತಗೌಡ ಪಾಟೀಲ, ಸಂಗಮೇಶ ಸಗರ, ಕೆ.ಎಂ.ಗುಡ್ನಾಳ ಮತ್ತಿತರರಿದ್ದರು.
- ರೈತ ಸಂಘ, ಹಸಿರು ಸೇನೆಯಿಂದ ಒತ್ತಾಯ
- ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ
ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬರುವ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ 36 ಕೆರೆಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಮಂಗಳವಾರ ಮುಖ್ಯ ಇಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.
ಈಗಾಗಲೇ ಏಪ್ರೀಲ್ನಲ್ಲಿ ಕೆರೆಗಳ ಭರ್ತಿಗಾಗಿ ನೀರು ಹರಿಸಲಾಗಿದೆ. ಆದರೆ 36 ಕೆರೆಗಳ ಭರ್ತಿಗೆ ಒಂದು ಹನಿ ನೀರು ಕಾಲುವೆಗೆ ಹರಿದಿಲ್ಲ. ವಿದ್ಯುತ್ ಪ್ರಸರಣದ ಟಾವರ್ ಬಿದ್ದು ವಿದ್ಯುತ್ ಸಮಸ್ಯೆ ನೆಪವನ್ನು
ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಂಬ ಬಿದ್ದು ಒಂದು ತಿಂಗಳು ಕಳೆದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ ಎಂದು ರೈತರು ಆರೋಪಿಸಿದರು. ಹುಲಗಬಾಳ, ಜಕ್ಕದಾಳ, ಹಗರಗೊಂಡ, ತಾರನಾಳ, ತಮದಡ್ಡಿ, ಹಡಲಗೇರಿ, ಗುಂಡಕರ್ಜಗಿ , ಪಡೇಕನೂರ, ಆಲಕೊಪ್ಪರ ಮತ್ತೀತರ 36 ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಮ್ಮ ಭಾಗದ ರೈತ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು. ಕೆರೆಗಳ ಭರ್ತಿಯಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಪಷ್ಟ ಭರವಸೆ ನೀಡದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ರೈತ ಸಂಘಟನೆ ಘಟಕದ ಉಪಾಧ್ಯಕ್ಷ ಶಾಂತಗೌಡ ಪಾಟೀಲ (ನಡಹಳ್ಳಿ), ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ, ನಿಡಗುಂದಿ ತಾಲೂಕಾಧ್ಯಕ್ಷ ಕೆ.ಎಂ.ಗುಡ್ನಾಳ ಪಟ್ಟು ಹಿಡಿದರು.
ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಅಮರೇಗೌಡ ಹಾಗೂ ಅಬೂಬಕರ ಬಾಗವಾನ ಐದು ದಿನದೊಳಗೆ ವಿದ್ಯುತ್ ಟಾವರ್ ನಿರ್ಮಾಣ ಪೂರ್ಣಗೊಳಿಸಿ, ಶೀಘ್ರವೇ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಮಹಾಂತಗೌಡ ಬಿರಾದಾರ, ಸೀತಪ್ಪ ಗಣಿ, ರವಿ ಕೋತಿನ, ರಾಜು ವಾಲಿಕಾರ, ಅಪ್ಪುಗೌಡ ಪಾಟೀಲ, ಬಸವರಾಜ ಪಾಟೀಲ, ಶ್ರೀಕಾಂತ ಬಿರಾದಾರ, ಸಂಗಪ್ಪ ಟಕ್ಕೇರಿ, ಮಹಾದೇವ ಬನಸೋಡೆ, ಸತ್ಯಪ್ಪ ಕಾಳೆ, ಅಮೋಘಸಿದ್ಧ ಡೋಣೂರ ಮತ್ತಿತರರಿದ್ದರು.