ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಪಟ್ಟು road
- ನಗರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣಗೆ ಮನವಿ
ಬಂಗಾರಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಉನ್ನತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಬೇಕು ಹಾಗೂ ಗಂಗಮ್ಮನಪಾಳ್ಯ ಮುಖ್ಯರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯರಸ್ತೆ ಎಂದು ನಾಮಕರಣ ಮಾಡಿ ದಶಕಗಳು ಕಳೆದಿದ್ದು, ಸದರಿ ರಸ್ತೆ ಅಕ್ರಮ ಒತ್ತುವರಿದಾರರ ಕಪಿಮುಷ್ಠಿಯಲ್ಲಿ ಸಿಲುಕಿ ಒತ್ತುವರಿಯಾಗಿ ಕಿರಿದಾಗಿದೆ. ರಸ್ತೆಯನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ದಲಿತ ಸಂರ್ಷ ಸಮಿತಿ&ಕರ್ನಾಟಕ ಜಿಲ್ಲಾ ಸಂಚಾಲಕ ಕಲಾವಿದ ಯಲ್ಲಪ್ಪ ಪಟ್ಟಣದ ನಗರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು. road
ಕಲಾವಿದ ಯಲ್ಲಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭವನ, ಕನ್ನಡ ಭವನ, ಪತ್ರಕರ್ತರ ಭವನ, ತೋಟಗಾರಿಕೆ ಇಲಾಖೆ, ಲಯನ್ಸ್ ಭವನ ಕಟ್ಟಡಗಳಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಅನುದಾನ ಬಿಡುಗಡೆ ಮಾಡಿ ಭವ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಹಾಗೂ ಅಂಬೇಡ್ಕರ್ ರಸ್ತೆ ವಿಸ್ತರಣೆಗಾಗಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆದರೆ ಈ ರಸ್ತೆಯು ತುಂಬಾ ಕಿರಿದಾಗಿದ್ದು, ರಸ್ತೆ ಬದಿಯ ಚರಂಡಿಯ ಮೇಲೆ ಮನೆ ಹಾಗೂ ವಾಣಿಜ್ಯ ಮಳಿಗೆ ಕಟ್ಟಿರುವುದರಿಂದ ಸವಾರರಿಗೆ, ಸಾರ್ವಜನಿಕರಿಗೆ ಕಷ್ಟವಾಗಿದೆ ಎಂದರು.
ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಶಾಸಕರಿಗೆ ರಸ್ತೆ ವಿಸ್ತರಣೆ ವಿಚಾರವಾಗಿ ಅನೇಕ ಬಾರಿ ದಲಿತ ಸಂಟನೆಗಳು ಮತ್ತು ಗಂಗಮ್ಮನಪಾಳ್ಯ ನಿವಾಸಿಗಳು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಇದುವರೆಗೂ ಯಾರು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.