Demand that the demands of Anganwadi workers be met
ಬಾಗೇಪಲ್ಲಿ: ಅಂಗನವಾಡಿಗಳ ಮೂಲಕ ಮಕ್ಕಳ ಪಾಲನೆ&ಪೋಷಣೆ, ಪೂರ್ವ ಶಿಕ್ಷಣದಂತಹ ಸಂವಿಧಾನಬದ್ಧ ಕರ್ತವ್ಯಗಳು ನಿರ್ವಹಿಸುತ್ತಿರುವ ಅಂಗನವಾಡಿ ನೌಕರರನ್ನು 3 ಮತ್ತು 4ನೇ ಗ್ರೇಡ್ ಸರ್ಕಾರಿ ನೌಕರರಂತೆ ಪರಿಗಣಿಸಿ ನಿಯಮ ರೂಪಿಸಬೇಕು ಎಂದು ಅಂಗನವಾಡಿ ನೌಕರರ ಸಂದ ತಾಲೂಕು ಅಧ್ಯೆ ಕೆ.ರತ್ನಮ್ಮ ಒತ್ತಾಯಿಸಿದರು.
ತಾಪಂ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಮನವಿ ಸಲ್ಲಿಸಿ ಮಾತನಾಡಿ, ಸುಪ್ರೀಂ, ಗುಜರಾತ್ ಹೈಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರನ್ನು 3 ಮತ್ತು 4ನೇ ಗ್ರೇಡ್ ಸರ್ಕಾರಿ ನೌಕರರಂತೆ ಪರಿಗಣಿಸಿ ನಿಯಮ ರೂಪಿಸಬೇಕು.
ರಾಜ್ಯದಲ್ಲಿ ಅಂಗನವಾಡಿಗಳನ್ನು ಬಲಪಡಿಸುವ ಬದಲು 4 ವರ್ಷ ಮೇಲ್ಪಟ್ಟ ಮಕ್ಕಳನ್ನು ಶಾಲೆಗಳ ಎಲ್ಕೆಜಿ&ಯುಕೆಜಿ ತರಗತಿಗಳಿಗೆ ಸ್ಥಳಾಂತರಿಸುವ ಪ್ರಯತ್ನಗಳಿಂದ ಯೋಜನೆ ದುರ್ಬಲವಾಗುತ್ತಿದೆ. ಅಂಗನವಾಡಿಗಳನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವ ನಿರ್ಧಾರ ಕೈಗೊಂಡಿದ್ದರೂ ಅಗತ್ಯ ಹಣಕಾಸು ಬಿಡುಗಡೆ ಆಗುತ್ತಿಲ್ಲ ಎಂದರು.
6 ವರ್ಷದೊಳಗಿನ ಮಕ್ಕಳು ಐಸಿಡಿಎಸ್ ಅಡಿಯಲ್ಲಿರುವುದನ್ನು ಖಾತ್ರಿ ಪಡಿಸಿ, ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್ಐ, ಪಿಎಫ್ ನೀಡಿ. ಅಂಗನವಾಡಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ್ದರಿಂದ ಬಿಎಸ್ ಪರವಾನಿಗೆ ರದ್ದುಗೊಳಿಸಿ ಸ್ಥಳಿಯವಾಗಿ ಸಿಗುವ ಆಹಾರ ಸರಬರಾಜು ಮಾಡಿ. ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆಯರ, ಸಹಾಯಕಿಯರಿಗೂ 183 ಕೋಟಿ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಖಾಲಿ ಇರುವ ಅಂಗನವಾಡಿಗಳಿಗೆ ಸಂಬಂಧಿಸಿದ ಹುದ್ದೆಗಳನ್ನು ಭರ್ತಿ ಮಾಡಿ, ಬಿಎಲ್ಒ ಚುನಾವಣಾ ಕರ್ತವ್ಯಗಳಿಂದ ಅಂಗನವಾಡಿ ನೌಕರರನ್ನು ಬಿಡುಗಡೆ ಮಾಡಿ, ನಿವೃತ್ತರಿಗೆ ಮಾಸಿಕ 10 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.