ವಿಜಯಪುರ ತಾಲೂಕಿನ ಜಂಬಗಿ ಗ್ರಾಮದಲ್ಲಿನ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚದಂತೆ ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಿದ್ಧಲಿಂಗ ಬಾಗೇವಾಡಿ, ಚಂದ್ರಶೇಖರ ಹತ್ತಳ್ಳಿ ಇತರರಿದ್ದಾರೆ. 
ರಾಜ್ಯ

ವಸತಿ ಶಾಲೆ ಮುಚ್ಚದಂತೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೇ ಉಳಿಯಲಿ
  • ಬ್ಯಾನರ್ ಕಟ್ಟಿ ಜನರ ಆಕ್ರೋಶ
ವಿಜಯಪುರ: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರ ಮತ್ತು ಪೂಜಾರಿ ವಸ್ತಿ ಶಾಲೆಗಳನ್ನು ಮುಚ್ಚದಂತೆ ಒತ್ತಾಯಿಸಿ ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳು ಶಾಲೆಗಳ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಲ್ಲದೇ, ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೇ ಉಳಿಯಲಿ ಎಂಬ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಒ ಯುವಜನ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ಬರುತ್ತಿರುವ ದುಡ್ಡಿಗೋಸ್ಕರ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರ ಶಾಲೆ ಮುಚ್ಚಲು ಹೊರಟಿರುವ ಕ್ರಮ ಖಂಡನಾರ್ಹ. ನಾಗರಿಕ ಸಮಾಜ ಸೃಷ್ಟಿಸಲು ಕಾರಣವಾಗುವ ಶಿಕ್ಷಣ ನೀಡಲು ಶಾಲೆಗಳು ಅವಶ್ಯಕ.
ವಸತಿ ಶಾಲೆಗಳು ಬಂದ್ ಆದರೆ ಶಿಕ್ಷಣಕ್ಕಾಗಿ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ದೂರದ ಶಾಲೆಗೆ ಹೋಗುವುದು ಕಷ್ಟಕರವಾಗಲಿದೆ. ಶಿಕ್ಷಣ ಎಂಬುದು ಲಾಭ ನಷ್ಟ ನೋಡುವ ಕ್ಷೇತ್ರವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ಅವಶ್ಯಕ ಎಂಬುದನ್ನು ಮನಗಂಡು ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.
ನಾವು ಕಟ್ಟುವ ಪ್ರತಿಯೊಂದು ತೆರಿಗೆ ಹಣವೂ ಜನಪರ ಕೆಲಸಕ್ಕೆ ಖರ್ಚಾಗಬೇಕು. ಪ್ರತಿಯೊಬ್ಬ ಬಡವರ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು. ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಹತ್ತಳ್ಳಿ, ಶ್ರೀಶೈಲ ಕೆರೂರ, ಸಂಜು ಕೆರೂರ, ಸಚಿನ ಕೆರೂರ, ನಾಗೇಶ ಕೆರೂರ, ರಮೇಶ ಕೆಂಭಾವಿ, ನಿಂಗಣ್ಣ ಕೆರೂರ, ಶಿವಾನಂದ ಕೆರೂರ, ಶಿವಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಯಲ್ಲಪ್ಪ ಪೂಜಾರಿ ಮತ್ತಿತರರಿದ್ದರು.