ತಾಳಿಕೋಟೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಅಂಗಡಿಗಳನ್ನು ತೆರವುಗೊಳಿಸಬಾರದೆಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರಿಗೆ ಮನವಿ ಸಲ್ಲಿಸಿದರು. ಮಹಿಬೂಬ ಕುಳಗೇರಿ, ನದೀಂ ಕಡು, ಮುಸ್ತಾ ಅತ್ತಾರ, ಬಸವರಾಜ ಬಂಡಾರಿ, ದಾವಲಸಾ ಪಾನವಾಲೆ ಇತರರಿದ್ದರು.
- ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದಿಂದ ಆಗ್ರಹ
- ಪುರಸಭೆ ಮುಖ್ಯಾಧಿಕಾರಿಗೆ ಮನವಿ
ತಾಳಿಕೋಟೆ : ಪುರಸಭೆಯಿಂದ ಬೀದಿ ಬದಿ ವ್ಯಾಪಾರಸ್ಥರ ಲೈಸನ್ಸ್‌ದೊಂದಿಗೆ ತಾಳಿಕೋಟೆ ನಗರದ ಕೆಲವು ಭಾಗಗಳಲ್ಲಿ ತಮ್ಮ ಸಣ್ಣ ಪುಟ್ಟ ವ್ಯಾಪಾರಗಳೊಂದಿಗೆ ಜೀವನ ಸಾಗಿಸುವ ವ್ಯಾಪಾರಸ್ಥರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಕೂಡದೆಂದು ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
2014ರಲ್ಲಿ ಪ್ರಧಾನಮಂತ್ರಿಗಳು ಬೀದಿಬದಿ ವ್ಯಾಪಾರಿಗಳ ರಕ್ಷಣೆಗಾಗಿ ಕೆಲವು ಕಾಯ್ದೆಗಳನ್ನು ಜಾರಿಗೊಳಿಸುವುದರೊಂದಿಗೆ ರಕ್ಷಣೆಗೆ ಮುಂದಾಗಲು ಆದೇಶ ಮಾಡಿದ್ದಾರೆ. ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಕಾನೂನು ಬದ್ಧ ರಕ್ಷಣೆ ನೀಡುವುದು, ಅನಗತ್ಯವಾಗಿ ವ್ಯಾಪಾರಿಗಳನ್ನು ತೆರವು ಮಾಡದಂತೆ ರಕ್ಷಿಸುವುದು, ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿಬದಿ ವ್ಯಾಪಾರಿಗಳ ಕಮಿಟಿ ರಚಿಸುವುದು, ಸಮೀಕ್ಷೆ ನಡೆಸಿ ಅರ್ಹ ವ್ಯಾಪಾರಿಗಳಿಗೆ ವ್ಯಾಪಾರ ಪ್ರಮಾಣ ಪತ್ರ ನೀಡುವುದು, ವ್ಯಾಪಾರ ವಲಯವನ್ನು ಗುರುತಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದು, ತೆರವುಗೊಳಿಸುವ ಅಗತ್ಯ ಬಂದರೆ ಕಾಯ್ದೆಯ ನಿಯಮಗಳನ್ನು ಅನುಸರಿಸಿ ಮಾತ್ರ ಕ್ರಮ ಕೈಗೊಳ್ಳಬೇಕು ಎಂಬ ಇತ್ಯಾದಿ ಪ್ರಮುಖ ಅಂಶಗಳನ್ನು ಜಾರಿ ಮಾಡಿದ್ದಾರೆ.
ಕಾಯ್ದೆಯಡಿ ಸುಮಾರು 200ಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರು ಪುರಸಭೆಯಿಂದ ವ್ಯಾಪಾರಿ ಪರವಾನಗಿ ಪಡೆದುಕೊಂಡಿದ್ದು ಪ್ರತಿದಿನ ಭೂ ಬಾಡಿಗೆಯನ್ನು ಪುರಸಭೆಗೆ ಭರಣ ಮಾಡುತ್ತಿದ್ದಾರೆ, ಕಾರಣ ತಾವುಗಳು ಯಾವುದೇ ರೀತಿಯ ಕಾನೂನು ಕಾಯ್ದೆಗಳನ್ನು ಅನುಸರಿಸದೇ ತಾವುಗಳು ತೆರವುಗೊಳಿಸಲು ಮುಂದಾಗಿದ್ದು ಈ ತೆರವು ಕಾರ್ಯಚರಣೆಯ ಮುಂಚೆ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬೇರೆಡೆ ವ್ಯಾಪಾರ ಮಾಡುವಂತೆ ಸುಸರ್ಜ್ಜಿತ ಜಾಗವನ್ನು ಗುರುತು ಮಾಡಿ ಅಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಯಾವುದೇ ಕಾರಣ ನೀಡದೆ ಬೀದಿ ಬದಿ ವ್ಯಾಪಾರಿಗಳ ಮೇಲೆ ನಿರ್ಲಕ್ಷೃ ತೋರಿದಲ್ಲಿ ಎಲ್ಲ ಬೀದಿಬದಿ ವ್ಯಾಪಾರಿಗಳು ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಬೂಬ ಕುಳಗೇರಿ, ನದೀಂ ಕಡು, ಮುಸ್ತಾ ಅತ್ತಾರ, ಬಸವರಾಜ ಬಂಡಾರಿ, ದಾವಲಸಾ ಪಾನವಾಲೆ ಇತರರಿದ್ದರು.