ಇಂಡಿ ಪಟ್ಟಣದಲ್ಲಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ಘಟಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಕಿರಣ ಬಿರಾದಾರ, ಶಿವಯೋಗೆಪ್ಪ ಚನಗೊಂಡ, ಭಿಮಣ್ಣ ಕವಲಗಿ ಮತ್ತಿತರರಿದ್ದರು. 
ರಾಜ್ಯ

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಒತ್ತಾಯ
  • 21 ವಿದ್ಯಾರ್ಥಿಗಳ ದುರ್ಮರಣ ಖಂಡನೆ
ಇಂಡಿ : ಎನ್.ಟಿ.ಎ (ನೀಟ್) ಸಂಸ್ಥೆಯನ್ನು ರದ್ದುಪಡಿಸಬೇಕು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ಘಟಕ ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ಸಂಭವಿಸಿದ 21 ವಿದ್ಯಾರ್ಥಿಗಳ ದುರ್ಮರಣ ಖಂಡಿಸಿ ದೇಶವ್ಯಾಪಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸುವುದಾಗಿ ಹೇಳಿದರು. ಕೇಂದ್ರ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರನ್ನು ಬಳಸಿ ದೌರ್ಜನ್ಯ ಎಸಗಿರುವುದು ಖಂಡನೀಯ, ವಿದ್ಯಾರ್ಥಿಗಳ ಮತ್ತು ಯುವ ಸಮುದಾಯದ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಸುನೀಲಕುಮಾರ ಅತನೂರ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅವಿನಾಶ ಬಗಲಿ ಮಾತನಾಡಿ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ಕ್ಷೇತ್ರದ ಪಾರದರ್ಶಕತೆಯನ್ನು ರಕ್ಷಿಸುವ ಹಿತದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹೋರಾಟ ಹಮ್ಮಿಕೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಗೊಂದಲಗಳಿಂದಾಗಿ ದೇಶದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಹೀಗಾಗಿ ತಕ್ಷಣವೇ ಎನ್.ಟಿ.ಎ ಸಂಸ್ಥೆಯನ್ನು ರದ್ದುಗೊಳಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ತರಬೇಕು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ನೀಡಬೇಕು. ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಘಟಕ ಇಂಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ಪ್ರತಿಭಟನೆ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ, ಸಂಗೊಳ್ಳಿ ರಾಯಣ್ಣ ವತ್ತದ ಮೂಲಕ ನಡೆದು ಮಿನಿ ವಿಧಾನಸೌಧ ತಲುಪಿತು. ಎಸಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಕಿರಣ ಬಿರಾದಾರ, ಶಿವಯೋಗೆಪ್ಪ ಚನಗೊಂಡ, ಭಿಮಣ್ಣ ಕವಲಗಿ, ಶ್ರೀಕಾಂತ ಕುಡಿಗನೂರ, ಜಾವೀದ ಮೋಮಿನ, ಸುನೀಲ ಅತನೂರ, ಸಚಿನ ಹೊಸಮನಿ, ಸಂಚಾಲಕ ಸಂತೋಷ ರವಳಿ, ಸುದೀಪ್ ಕಿತ್ತಲಿ, ಈಶ್ವರ ಸಜ್ಜನ, ಅಕ್ಬರ್ ಖಾನಿ, ಅಬ್ರಾರ ಮಕಂದರ, ಭರತ್ ಮಡ್ಡಿಮನಿ, ಗೋವಿಂದ ವಡ್ಡರ, ಆನಂದ, ಸತೀಶ ಹತ್ತಿ ಮತ್ತಿತರರಿದ್ದರು.