ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)  
ರಾಜ್ಯ

ಆರೋಗ್ಯಧಿಕಾರಿ ಡಾ. ಎಸ್.ಕೆ.ಸವಿತಾ ಅಮಾನತಿಗೆ ಆಗ್ರಹ: ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ- Demand for suspension of Health Officer

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸದೆ ತಮ್ಮ ಪುತ್ರನ ಹೆಸರಿನಲ್ಲಿ 1 ಕೋಟಿ ರೂ. ಹೆಚ್ಚು ಹಣ ದುರುಪಯೋಗಪಡಿಸಿಕೊಂಡು, ನಂಬಿಕೆ ದ್ರೋಹ ಎಸಗಿರುವ ಆರೋಗ್ಯಧಿಕಾರಿ ಡಾ. ಎಸ್.ಕೆ. ಸವಿತಾ ಅವರನ್ನು ತಕ್ಷಣ ಅಮಾನತುಗೊಳಿಸಿ(Demand for suspension), ಕ್ರಿಮಿನನ್ ಮೊಕದ್ದಮೆ ದಾಖಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ - ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್, ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಆರೋಗ್ಯಧಿಕಾರಿ ಡಾ. ಎಸ್.ಕೆ. ಸವಿತಾ ಹಾಗೂ ಜ್ಯೋತಿನಿವಾಸ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಆಗಿರುವ ಆಕೆಯ ಪುತ್ರ ಚಿರಾಗ್, ಪಾಲಿಕೆಯಲ್ಲಿ ಕಾಮಗಾರಿ ನಡೆಸದೆ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪವು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವ ಹಾಗೂ ಇಲಾಖೆಯ ಅಪರ ಕಾರ್ಯದರ್ಶಿಗಳು ವಿಚಾರಣೆಗೆ ಆದೇಶಿಸಿದ್ದಾರೆ.
ಸವಿತಾ ಅವರು ಬೊಮ್ಮನಹಳ್ಳಿ ಮತ್ತು ಆರ್.ಆರ್.ನಗರವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೆ॥ ಎ.ವಿ.ಎಸ್ ಎಂಟರ್ ಪ್ರೈಸಸ್’ ಸಂಸ್ಥೆ ಹೆಸರಿನಲ್ಲಿ ತಮ್ಮ ಪುತ್ರ ಚಿರಾಗ್ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಿ ವಂಚಿಸಿರುವುದು ಕಂಡುಬಂದಿದೆ. ಈ ಕುರಿತು ತನಿಖೆ ನಡೆಸಲು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಯಾಜ್ ಅಹ್ಮದ್ ಎಸ್.ದಫೇದಾರ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ.
ಪೂರ್ವ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಗಣಕಯಂತ್ರ ನಿರ್ವಾಹಕರು ಹಾಗೂ ಸ್ಟಾಫ್​​​​​ ಕಲೆಕ್ಟರ್ ಹೆಸರಿನಲ್ಲಿದ್ದ ಲಕ್ಷಾಂತರ ರೂ.ಹಣವನ್ನು ಚಿರಾಗ್ ಖಾತೆಗೆ ವರ್ಗಾಯಿಸಿಕೊಂಡು ಪಾಲಿಕೆಗೆ ವಂಚಿಸಿದ್ದಾರೆ. ಈ ಪ್ರಕರಣದ ತನಿಖೆಗೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ವೈ. ವಸಂತಕುಮಾರ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ.
ಆರ್.ಆರ್.ನಗರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ಪೂರ್ವ ವಲಯಗಳಲ್ಲಿ ಯಾವುದೇ ಕಾಮಗಾರಿ ಮಾಡದೆ 1 ಕೋಟಿ ರೂ.ಗೂ ಅಧಿಕ ಹಣ ದುರುಪಯೋಗ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಸವಿತಾ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ನಗರಾಭಿವೃದ್ಧಿ ಸಚಿವರು ಹಾಗೂ ಅಪರ ಕಾರ್ಯದರ್ಶಿಗಳು ಪೂರ್ವಾನುಮತಿ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಚಿರಾಗ್‌ಗೆ ಕಾಮಗಾರಿಗಳ ಬಗ್ಗೆ ಯಾವುದೆ ಅರಿವಿಲ್ಲದಿದ್ದರೂ, ಪಾಲಿಕೆಯ ಹಣವನ್ನು ಮೊದಲು ಅವರ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ. ನಂತರ ಆ ಮೊತ್ತವನ್ನು ಚಿರಾಗ್ ಖಾತೆಯಿಂದ ಡಾ. ಸವಿತಾ ಅವರ ಖಾತೆಗೆ ಹಾಗೂ ಅಲ್ಲಿಂದ ಅವರ ತಂದೆ ಕೃಷ್ಣ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಪ್ರಕರಣದ ಬಗ್ಗೆ ಅಮೃತ್‌ರಾಜ್ ವಿವರಿಸಿದ್ದಾರೆ.