ಔರಾದ್ ತಾಲೂಕಿನ ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹುಮನಾಬಾದ್ನಲ್ಲಿ ಶನಿವಾರ ತಾಲೂಕು ಪ್ರಗತಿಪರ ಮತ್ತು ದಲಿತ ಸಂಟನೆಗಳ ಒಕ್ಕೂಟದಿಂದ ಡಿವೈಎಸ್ಪಿ ಮಡೋಳಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಅಂಕುಶ ಗೋಖಲೆ, ವಿಷ್ಣುವರ್ಧನ ವಾಲದೊಡ್ಡಿ, ರಾಜುಕುಮಾರ ಮೂಲಭಾರತಿ, ರಾಜಕುಮಾರ ಸಿಂಧೆ, ಕೆ.ಎಂ.ಗಜೇಂದ್ರ, ಶಿವರಾಜ ಚೀನಕೇರಾ, ಜಮೀಲ್ ಖಾನ್, ದೇವೇಂದ್ರಪ್ಪ ಪೋಲಾ, ಗೌತಮ ಚವ್ಹಾಣ್, ಗಣಪತಿ ಅಷ್ಟೂರೆ ಇತರರಿದ್ದರು.
- ಬೆಳಕುಣಿಯಲ್ಲಿ ಬಾಲಕಿ ಸಾವು
- ಹುಮನಾಬಾದ್ನಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
ಹುಮನಾಬಾದ್: ಔರಾದ ತಾಲೂಕಿನ ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ರ್ನಿಲಕ್ಷ ವಹಿಸಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಶನಿವಾರ ತಾಲೂಕು ಪ್ರಗತಿಪರ ಮತ್ತು ದಲಿತ ಸಂಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿವೈಎಸ್ಪಿ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಮುಖರಾದ ಅಂಕುಶ ಗೋಖಲೆ, ವಿಷ್ಣುವರ್ಧನ ವಾಲದೊಡ್ಡಿ, ರಾಜುಕುಮಾರ ಮೂಲಭಾರತಿ, ರಾಜಕುಮಾರ ಸಿಂಧೆ, ಕೆ.ಎಂ.ಗಜೇಂದ್ರ, ಶಿವರಾಜ ಚೀನಕೇರಾ, ಜಮೀಲ್ ಖಾನ್, ಗೌತಮ ಚವ್ಹಾಣ್, ಗಣಪತಿ ಅಷ್ಟೂರೆ ಮಾತನಾಡಿ, ಬೆಳಕುಣಿ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಪ್ರದಿಪ್ ಗುಂಟೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಎಸ್ಪಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಹೋರಾಟಗಾರಿಗೆ ವಿನಾಕಾರಣ ನೋಟಿಸ್ ನೀಡಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಗಮನಹರಿದೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡವಲ್ಲಿ ವಿಫಲರಾಗಿದ್ದಾರೆ. ಕೂಡಲೇ ದಲಿತ ಬಾಲಕಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ನಿಷ್ಪಪಾತವಾಗಿ ತನಿಖೆ ಮಾಡಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಕೂಡಲೇ ಸರ್ಕಾರ ಗಮನ ಹರಿಸಿ ಬೇಡಿಕೆಗಳು ಈಡೇರಿಸದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ, ಗೃಹ ಸಚಿವರಿಗೆ ಬರೆದ ಮನವಿ ಪತ್ರ ಡಿವೈಎಸ್ಪಿ ಮಡೋಳಪ್ಪ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ದಿಲೀಪಕುಮಾರ ಮರಪಳ್ಳಿಕರ, ಚೇತನ ಗೋಖಲೆ, ಮನೋಜ ಜಾನವೀರ, ರಜನಿಕಾಂತ, ಕ್ರಾಂತಿಕುಮಾರ ಇತರರಿದ್ದರು. ಸಿಪಿಐ ಸಂತೋಷ ತಟ್ಟೆಪಳ್ಳಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.