ಯಾದಗಿರಿ ನಗರದ ಹೊರ ವಲಯದ ಭೀಮಾ ನದಿಗೆ ಹೋಗುವ ರಸ್ತೆ ಇಳಿಜಾರಿನಿಂದ ಕೂಡಿರುವುದು.
ಯಾದಗಿರಿ: ನಗರದ ಹಳೆಯ ಬಸ್ ನಿಲ್ದಾಣದಿಂದ ವಡಗೇರಾ ಕ್ರಾಸ್ ವರೆಗೆ ಹೆದ್ದಾರಿ ಕಾಮಾಗಾರಿ ಎತ್ತರ ಹೆಚ್ಚಿಸಿ ರಸ್ತೆ ಅಗಲೀಕರಣಗೊಳಿಸಲಾಗಿದ್ದು, ಇದರಿಂದ ಭೀಮಾ ನದಿಯ ರಸ್ತೆ ಹೆದ್ದಾರಿಗೆ ಹೊಂದಿಕೊಂಡು ತಾತ್ಕಲಿಕವಾಗಿ ಮುರುಮ್ ಹಾಕಿ ಇಳಿಜಾರು ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ಲೋಕಾಯುಕ್ತ ಕಚೇರಿಗೆ ಹಾಗೂ ರೈಲ್ವೆ ನಿಲ್ದಾಣದ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ಭೀಮಾ ನದಿಗೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡದೆ ಕೇವಲ ಮುರುಮ್ ಹಾಕಿ ಇಳಿಜಾರು ಆಗಿದ್ದರಿಂದ ತೀವ್ರ ಸಮಸ್ಯೆಯಾಗಿದೆ.
ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಸಂಚಾರಕ್ಕೆ ತುಂಬ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡ ಈ ರಸ್ತೆ ಮೂಲಕ ಹೋಗುತ್ತಾರೆ. ಅವರ ಕಣ್ಣಿಗೆ ಕಂಡರೂ ಕಾಣದಿರುವುದು ಭೀಮಾ ನದಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿಯಿಂದ ನದಿಗೆ ಇಳಿಜಾರು ಪ್ರದೇಶದಲ್ಲಿ ಡಾಂಬರ್ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಸಿಮೆಂಟ್ ರಸ್ತೆ ಮಾಡಬೇಕು ಎಂದು ನಗರದ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ನದಿ ಸ್ನಾನ ಸೇರಿ ಇತರೆ ಧಾರ್ಮಿಕ ಕಾರ್ಯಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಭಕ್ತರು ಆಗ್ರಹಿಸಿದ್ದಾರೆ.