- * ಕನ್ನಡಪರ ಸಂಘಟನೆಗಳಿಂದ ಒತ್ತಾಯ
ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ‘ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ’ ಎಂದು ಮೇ 13ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಗಡಿ ವಿವಾದದ ಬಗ್ಗೆ ಬೆಳಗಾವಿ ನಗರ ಪಾಲಿಕೆಯ ಈ ನಿರ್ಣಯವನ್ನು ದಾಖಲೆಗೆ ಪೂರಕವಾಗಿ ಬಳಸಿಕೊಂಡಿರುವುದರಿಂದ ಈಗ ಬಹುಸಂಖ್ಯಾತ ಕನ್ನಡ ಸದಸ್ಯರೇ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. ಈ ಸದಸ್ಯರು ಬೆಳಗಾವಿ ಕರ್ನಾಟಕದ ನೆಲ, ಮಹಾಜನ್ ವರದಿಯೇ ಅಂತಿಮ ಎಂದು ನಿರ್ಣಯ ಅಂಗೀಕರಿಸುವುದರ ಮೂಲಕ ಕರ್ನಾಟಕದ ಹಿತವನ್ನು ಕಾಪಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್. ಶಿವರಾಮೇಗೌಡ ಮತ್ತು ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ ಒತ್ತಾಯಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮಹಾಪೌರರು ಒಳಗೊಂಡ ಅಂದಿನ ಸದಸ್ಯರು 2005ರ ಅ.27ರಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಅಂಗೀಕರಿಸಿ, ಕರ್ನಾಟಕಕ್ಕೆ ದ್ರೋಹ ಎಸಗಿದ್ದುಂಟು ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.