Demand for repair of potholes on roads
ಚಿಂತಾಮಣಿ : ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿ ಮಾಡಿ ಸುರತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ತಾಲೂಕು ಅಧ್ಯಕ್ಷ ಅಬ್ದುಲ್ಖಯ್ಯೂಮ್ ಎಚ್ಚರಿಸಿದ್ದಾರೆ.
ನಗರದ ಹಲವು ರಸ್ತೆಗಳಲ್ಲಿ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಗುರುವಾರ ಚಿಂತಾಮಣಿ ನಗರಸಭೆ ಪೌರಾಯುಕ್ತರಿಗೆ ಕೆಆರ್ಎಸ್ನಿಂದ ಮನವಿ ಸಲ್ಲಿಸಿ ಮಾತನಾಡಿ, ಚಿಂತಾಮಣಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಪ್ರಸ್ತುತ ಮಳೆಗಾಲವಾದ್ದರಿಂದ ಗುಂಡಿಗಳಲ್ಲಿ ನೀರು ನಿಂತು ಸವಾರರಿಗೆ ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಚೇಳೂರು ಸರ್ಕಲ್ ಸಿಗ್ನಲ್ನಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗಿನ ರಸ್ತೆ, ಪಾಲಿಟೆಕ್ನಿಕ್ ರಸ್ತೆ, ಮಹಿಳಾ ಕಾಲೇಜು, ಎಚ್ಡಿಎಫ್ಸಿ ಬ್ಯಾಂಕ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಬೆಂಗಳೂರು ಸರ್ಕಲ್ ಸಿಗ್ನಲ್ ಸಮೀಪದ ರಸ್ತೆ, ಎನ್.ಆರ್ ಬಡಾವಣೆಯ ವಾಸವಿ ಕಲ್ಯಾಣ ಮಂಟಪ ರಸ್ತ್ತೆ, ಮೈಸೂರು ಆಸ್ಪತ್ರೆ ರಸ್ತೆ, ಪೂರ್ಣ ಕಣ್ಣಿನ ಆಸ್ಪತ್ರೆ ರಸ್ತೆ ಹಾಗೂ ಅಗ್ರಹಾರ ಕಸ್ತೂರಿಬಾ ರಸ್ತೆ, ಅಂಜನಿ ಬಡಾವಣೆಯ ಹಲವಾರು ರಸ್ತೆಗಳು, ಅಶ್ವಿನಿ, ರಾಜೀವನಗರ ಬಡಾವಣೆ ಸೇರಿ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು, ಇವುಗಳನ್ನು ತುರ್ತಾಗಿ ದುರಸ್ತಿಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.
ಕಣ್ಣೊರೆಸುವ ತಂತ್ರವಾಗಿ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಬದಲು, ಗುಣಮಟ್ಟದ ಕಾಮಗಾರಿ ನಡೆಸಿ ಪರಿಹಾರ ಒದಗಿಸಬೇಕು. ಅಗತ್ಯವಿದ್ದಲ್ಲಿ ರಸ್ತೆ ಮರುಡಾಂಬರೀಕರಣ ಕೈಗೊಳ್ಳಬೇಕು. 8 ದಿನಗಳ ಒಳಗಾಗಿ ನಗರಸಭೆ ಕ್ರಮ ಕೈಗೊಳ್ಳದಿದ್ದರೆ, ಕೆಆರ್ಎಸ್ ಪಕ್ಷದಿಂದ ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿ, ಬಳಿಕ ಹೋರಾಟ ಹಮ್ಮಿಕೊಳ್ಳಲಾಗುವುದು.
ಇದರಿಂದಾದ ಅಹಿತಕರ ಘಟನೆಗಳಿಗೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಅಬ್ದುಲ್ ಖಯ್ಯೂಮ್ ತಿಳಿಸಿದರು.
ಪಕ್ಷದ ಪದಾಧಿಕಾರಿಗಳಾದ ವಿಶ್ವನಾಥ, ನಾಗರಾಜ್, ಚಂದ್ರು, ಮೆಹಬೂಬ್ ಪಾಷಾ, ಶಿವಾ ಇದ್ದರು.
ಚಿಂತಾಮಣಿ ನಗರಸಭೆ ಪೌರಾಯುಕ್ತಗೆ ಕೆಆರ್ಎಸ್ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.