ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಿರಿಯಾಪಟ್ಟಣದಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಹೊಸೂರು ಕುಮಾರ್, ಕೊಣಸೂರು ಆನಂದ್, ಸಿ.ಎಸ್.ಜಗದೀಶ್, ನೇತ್ರಾವತಿ ಇತರರಿದ್ದರು.
- ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ
- ರಾಗಿ ಖರೀದಿ ಮಾಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು
ಪಿರಿಯಾಪಟ್ಟಣ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಮಾಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಪ್ರತಿ ವರ್ಷ ರೈತ ಸಂಘದ ಒತ್ತಾಯದ ಬಳಿಕ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದು ರಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ಖರೀದಿ ನಂತರ ಕನಿಷ್ಠ ಒಂದು ವಾರದೊಳಗೆ ಹಣ ಪಾವತಿ ಮಾಡುತ್ತಿಲ್ಲ. ಈಗ ಕೆಲವು ರೈತರಿಗೆ ಐದು ತಿಂಗಳು ಕಳೆದರೂ ಸಹ ಪಾವತಿಸಿಲ್ಲ ಎಂದು ದೂರಿದರು.
ಸರ್ಕಾರದ ಬೆಂಬಲ ಬೆಲೆಯಿಂದ ರೈತರಿಗೆ ಉಪಯೋಗವಾಗುತ್ತಿದೆಯಾದರೂ ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದಿರುವುದು ಮತ್ತು ರೈತರಿಗೆ ರಾಗಿ ಖರೀದಿ ಹಣವನ್ನು ಕೊಡಲು ವಿಳಂಬ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೂ ಶೇ.50 ರಷ್ಟು ರೈತರಿಗೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ತಕ್ಷಣ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಕೊಣಸೂರು ಆನಂದ್ ಮಾತನಾಡಿ, ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಯಾವುದೇ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದಾಗಿದೆ. ಮಳೆಯನ್ನೇ ನಂಬಿ ಬೇಸಾಯ ಮಾಡುವ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ತಹಸೀಲ್ದಾರ್ ನಿಸರ್ಗ ಪ್ರಿಯಾ ಅವರ ಮೂಲಕ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸದಸ್ಯ ಚಾಮರಾಯನ ಕೋಟೆ ಸಿ.ಎಸ್.ಜಗದೀಶ್, ರೈತ ಸಂಘದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ರಾಜೇ ಅರಸ್, ಆಲಿ ಜಾನ್, ಕಾರ್ಯಧ್ಯಕ್ಷ ರಘುಪತಿ, ಪ್ರಧಾನ ಕಾರ್ಯದರ್ಶಿ ಗುರುರಾಜ್, ಪದಾಧಿಕಾರಿಗಳಾದ ಬೆಂಕಿಪುರ ಚಿಕ್ಕಣ್ಣ, ಈಶ್ವರ್, ಮಹದೇವ್, ನೇತ್ರಾವತಿ, ಮಲ್ಲೇಶ್, ಹರೀಶ್, ಗಣೇಶ್, ಸತೀಶ್, ಕರೀಗೌಡ, ಜಯಣ್ಣ, ರವಿ, ನವೀನ್ ಅರಸ್ ಇತರರಿದ್ದರು.