Demand for Morarji Residential School in Hosur
ಗೌರಿಬಿದನೂರು: ಶಿಕ್ಷಣ ತ, ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ತವರೂರಾದ ಹೊಸೂರಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪಿಸಿದ ಶಾಸಕರು, ಜ್ಞಾನದ ಮೂಲಕ ತಾಲೂಕಿನ ಕೀರ್ತಿಯನ್ನು ರಾಜ್ಯಾದ್ಯಂತ ನೆನಪಿಸುವಂತೆ ಮಾಡಿದವರು. ಡಾ.ಎಚ್. ನರಸಿಂಹಯ್ಯ. ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟರು. ವಿಚಾರವಾದಿಯಾಗಿ ಮೂಡ ನಂಬಿಕೆಗಳನ್ನು ವಿರೋಧಿಸಿ ಜನರಿಗೆ ವಿಜ್ಞಾನದ ವಿಚಾರಗಳನ್ನು ತಿಳಿಸಿದರು.
ಹುಟ್ಟುರಾದ ಹೊಸೂರು ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಿ ಹಿಂದುಳಿದ ವರ್ಗಗಳ, ದಲಿತ, ಅಲ್ಪ ಸಂಖ್ಯಾತ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ರಾಜ್ಯದ ಪ್ರತಿ ಹೋಬಳಿಗೆ ಒಂದು ವಸತಿ ಶಾಲೆ ಮಂಜೂರು ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ಬಾರಿ ಬಜೆಟ್ ಅಲ್ಲಿ 66 ವಸತಿ ಶಾಲೆಗಳನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಹೊಸೂರಿನಲ್ಲಿ ವಸತಿ ಶಾಲೆ ಪ್ರಾರಂಭಿಸಲು 10 ಎಕರೆ ಕಂದಾಯ ಭೂಮಿ ಇದೆ ಎಂದು ಸ್ಥಳಿಯ ಶಾಸಕರು ತಿಳಿಸಿದ್ದಾರೆ. ಆದ್ದರಿಂದ ಪರಿಶೀಲಿಸಿ ಆದ್ಯತೆ ಮೇರೆಗೆ ಅಲ್ಲಿ ವಸತಿ ಶಾಲೆ ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.