ವರಮಹಾಲಕ್ಷ್ಮಿ  
ರಾಜ್ಯ

ಲಕ್ಷ್ಮಿ ನಾಣ್ಯ, ತಾಳಿ, ಬೆಳ್ಳಿ ಅಷ್ಟಲಕ್ಷ್ಮಿ ತಂಬಿಗೆಗೆ ಡಿಮಾಂಡ್ - occasion of Varamahalakshmi

ಬೆಂಗಳೂರು: ‘ಅಮ್ಮ ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮ..’, ‘ಲಕ್ಷ್ಮಿ ಮಹಾಲಕ್ಷ್ಮಿ...’

ವರಮಹಾಲಕ್ಷ್ಮಿ ಹಬ್ಬದ ದಿನದಂದು ‘ಲಕ್ಷ್ಮಿ ಮಹಾಲಕ್ಷ್ಮಿ’ ಚಿತ್ರದ ಈ ಹಾಡು ಎಲ್ಲರ ಮನೆಯಲ್ಲೂ ಕೇಳುತ್ತಿರುತ್ತದೆ. ಶ್ರಾವಣ ಮಾಸದ ಹುಣ್ಣಿಮೆಗೆ ಮುನ್ನ ಬರುವ ಪವಿತ್ರ ಶುಕ್ರವಾರದಂದು ಈ ಹಬ್ಬವನ್ನು ಕರ್ನಾಟಕ ಸೇರಿ ದಕ್ಷಿಣ ಭಾರತದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲು ಜನರು ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಆರೋಗ್ಯ, ನೆಮ್ಮದಿಯೊಂದಿಗೆ ಸಕಲ ಸಂಪತ್ತನ್ನು ಕರಣಿಸು ಎಂದು ಬೇಡುವ ಹಬ್ಬ ಇದಾಗಿದೆ. ಈ ಹಬ್ಬದಲ್ಲಿ ಲಕ್ಷ್ಮಿಯ ಚಿನ್ನ ಮತ್ತು ಬೆಳ್ಳಿ ವಿಗ್ರಹ ಖರೀದಿಸಿದರೆ ಒಳ್ಳೆಯದು ಎಂಬ ಭಾವನೆಯೂ ಇದೆ. ಹೀಗಾಗಿ, ಚಿನ್ನಾಭರಣ ಅಂಗಡಿಗಳಲ್ಲಿ 2 ಗ್ರಾಂನಿಂದ 5 ಗ್ರಾಂವರೆಗೆ ಲಕ್ಷ್ಮಿ ವಿಗ್ರಹ ಇರುವ ಚಿನ್ನದ ನಾಣ್ಯ, ತಾಳಿ, ಅಷ್ಟಲಕ್ಷ್ಮಿ ತಂಬಿಗೆ ಹಾಗೂ 5 ಗ್ರಾಂನಿಂದ 10 ಗ್ರಾಂವರೆಗೆ ಬೆಳ್ಳಿ ವಿಗ್ರಹ, ಬೆಳ್ಳಿ ಅಷ್ಟಲಕ್ಷ್ಮಿ ತಂಬಿಗೆ ಖರೀದಿಯಲ್ಲಿ ಹಲವರು ತೊಡಗಿದ್ದಾರೆ. ಅಲ್ಲದೆ, ಹಬ್ಬದ ನೆನಪಿಗಾಗಿ ಕೆಲವರು ಬೆಳ್ಳಿಯ ಕಳಶ, ತಟ್ಟೆ, ಲೋಟ,ಲಕ್ಷ್ಮಿಯ ಮುಖವಾಡಗಳನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಖರೀದಿಸಲು ಗ್ರಾಹಕರು ಈಗಾಗಲೇ ಉತ್ಸಾಹ ತೋರುತ್ತಿದ್ದಾರೆ. ಹಾಗಾಗಿ, ಆಭರಣಗಳ ಮಳಿಗೆಗಳಲ್ಲಿ ದಿನದಿಂದ ದಿನಕ್ಕೆ ಚಿನ್ನಾಭರಣಗಳ ಖರೀದಿಯ ಭರಾಟೆ ಜೋರಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಕ್ಷ್ಮಿ ಚಿತ್ರ ಇರುವ ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗೂ ಬೇಡಿಕೆ ಹೆಚ್ಚಾಗಿದೆ. ಕೆಲವರು ಮುಂಗಡವಾಗಿ ಆರ್ಡರ್ ಕೊಟ್ಟು ಮಾಡಿಸಿಕೊಳ್ಳುತ್ತಿದ್ದಾರೆ. ಕೆಳ ಹಾಗೂ ಮಧ್ಯಮ ಸೇರಿ ಎಲ್ಲ ವರ್ಗದವರೂ ಹೆಚ್ಚಾಗಿ ಲಕ್ಷ್ಮಿ ಕಾಯಿನ್‌ಗಳನ್ನು ಖರೀದಿಸುತ್ತಾರೆ. ಆನ್‌ಲೈನ್ ಬುಕಿಂಗ್ ಬದಲು ಪ್ರತಿ ಚಿನ್ನಾಭರಣ ಅಂಗಡಿಗಳಲ್ಲಿ ಶೇ.90 ಪರಿಚಯ ಇರುವ ಗ್ರಾಹಕರು ಇದ್ದಾರೆ. ಹೀಗಾಗಿ, ಸಂಪರ್ಕ ಇರುವವರು ಈಗಾಗಲೆ ಮುಂಗಡ ಪಾವತಿಸಿ ಹಾಗೂ ಪ್ರತಿ ತಿಂಗಳು ಕಂತಿನ ಮೂಲಕ ಚಿನ್ನಾಭರಣ ಖರೀದಿಸುತ್ತಿದ್ದಾರೆ.
ವರಮಹಾಲಕ್ಷ್ಮಿ, ದೀಪಾವಳಿ, ಅಕ್ಷಯಾ ತೃತೀಯಾ ಮತ್ತು ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಜಗತ್ತಿನಲ್ಲೇ ಅತಿಹೆಚ್ಚು ಭಾರತದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರು ಇದ್ದಾರೆ. ಶೇ.40 ಉತ್ತರ ಭಾರತದ ಗ್ರಾಹಕರು ಮತ್ತು ಶೇ.60 ದಕ್ಷಿಣ ಭಾರತದವರು ಖರೀದಿಸುತ್ತಾರೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಚಿನ್ನಾಭರಣ ವಹಿವಾಟು ದೇಶದಲ್ಲೇ ಹೆಚ್ಚು ನಡೆಯುತ್ತದೆ.
ರಾಜ್ಯದಲ್ಲಿ ಅಂದಾಜು 80ರಿಂದ 1 ಲಕ್ಷ ಚಿನ್ನಾಭರಣ ಅಂಗಡಿಗಳಿದ್ದು, ಈ ಹಬ್ಬದಲ್ಲಿ ಸಾವಿರಾರು ಕೆ.ಜಿ. ಚಿನ್ನ, ಬೆಳ್ಳಿ ಖರೀದಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲೈಟ್‌ವೇಟ್ ಆಭರಣ ಖರೀದಿಯ ಟ್ರೆಂಡ್ ಜೋರಾಗಿದೆ. ಗ್ರಾಹಕರು ಹಗುರ ತೂಕದ ಆಭರಣಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆ 50 ಗ್ರಾಂ ತೂಕದ ಬಳೆ, ನೆಕ್ಲೆಸ್ ಮತ್ತು ಸರಗಳು ಸೇರಿ ಇತರ ವಿನ್ಯಾಸದ ಆಭರಣಗಳು ಬರುತ್ತಿದ್ದವು. ಇದೀಗ ಮಾರುಕಟ್ಟೆಗಳಲ್ಲಿ ಕಡಿಮೆ ತೂಕ ಹೊಂದಿರುವ ಆಭರಣಗಳು ನೋಡುವುದಕ್ಕೂ ಚೆಂದವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು 10 ಗ್ರಾಂ ತೂಕವಿರುವ ಆಭರಣಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.
ವಿವಿಧ ಕೊಡುಗೆ ಘೋಷಣೆ
ಹಬ್ಬದ ಅಂಗವಾಗಿ ಹೆಚ್ಚು ಚಿನ್ನಾಭರಣಗಳ ಖರೀದಿ ಪ್ರಕ್ರಿಯೆ ನಡೆಯುವುದರಿಂದ ಗ್ರಾಹಕರನ್ನು ಸೆಳೆಯಲು ಕಾರ್ಪೋರೇಟ್ ವಲಯದ ಜುವೆಲ್ಲರಿ ಮಳಿಗೆಗಳು, ಚಿನ್ನ, ಬೆಳ್ಳಿ ಮತ್ತು ವಜ್ರಾಭರಣ ಖರೀದಿ ಮೇಲೆ ವಿಶೇಷ ಆರ್‌ಗಳನ್ನು ಘೋಷಿಸಿವೆ. ಮೇಕಿಂಗ್ ಮತ್ತು ವೇಸ್ಟೇಜ್ ಚಾರ್ಜ್‌ನಲ್ಲಿ ರಿಯಾಯಿತಿ ನೀಡಿವೆ.
ಚಿನ್ನಾಭರಣ ಬೆಲೆ ಜಾಸ್ತಿ ಇದ್ದರೂ ವರಮಹಾಲಕ್ಷ್ಮಿ ಪ್ರಯುಕ್ತ ಸಾವಿರಾರು ಗ್ರಾಹಕರು ಲಕ್ಷ್ಮಿ ಮುಖವಾಡ, ನಾಣ್ಯ, ತಾಳಿ, ಬೆಳ್ಳಿಯ ಅಷ್ಟಲಕ್ಷ್ಮಿ ತಂಬಿಗೆ ಖರೀದಿಸುತ್ತಿದ್ದಾರೆ. ನಗರ ಸೇರಿ ಗ್ರಾಮೀಣ ಪ್ರದೇಶಗಳ ಜುವೆಲ್ಲರಿ ಮಳಿಗೆಗಳಲ್ಲಿ ಒಳ್ಳೆಯ ವ್ಯಾಪಾರವಾಗುತ್ತಿದ್ದು, ಅಂಗಡಿ ಮಾಲೀಕರಂತೂ ಖುಷಿಯಾಗಿದ್ದಾರೆ.
ಡಾ.ಬಿ. ರಾಮಾಚಾರಿ, ಕರ್ನಾಟಕ ರಾಜ್ಯ ಆಭರಣ ತಯಾರಕರ ಸಂಘದ ಅಧ್ಯಕ್ಷ
ಚಿನ್ನ, ಬೆಳ್ಳಿ ದರ ವಿವರ
* 1 ಗ್ರಾಂ 24 ಕ್ಯಾರೆಟ್ ಚಿನ್ನ: 15,530
* 1 ಗ್ರಾಂ 22 ಕ್ಯಾರೆಟ್ ಚಿನ್ನ: 14,290
* 1 ಕೆ.ಜಿ. ಬೆಳ್ಳಿ: 2,40,000