Demand for increase in reservation
ಪಾವಗಡ : ಮೀಸಲಾತಿ ಹೆಚ್ಚಳ 9ನೇ ಶೆಡ್ಯೂಲ್ ಸೇರ್ಪಡೆಗೆ ಒತ್ತಾಯಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಪಂಚಾಯಿತಿ ಆವರಣದಿಂದ ತಹಸೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪ್ರಸಾದ್‌ಗೆ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಪಾಳೇಗಾರ್ ಲೋಕೇಶ್ ಮಾತನಾಡಿ, ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಪರಿಶಿಷ್ಟ ಜಾತಿಯ ಶೇ.15 ರಿಂದ ಶೇ.17 ಮತ್ತು ಪ.ಪಂಗಡದ ಶೇ.3 ರಿಂದ ಶೇ.7 ರಷ್ಟು ಮೀಸಲಾತಿಯನ್ನು 9ನೇ ಅನುಚ್ಛೇದಕ್ಕೆ ಸೇರಿಸಬೇಕು. ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ನೇಮಕಾತಿಯಲ್ಲಿ ಪ.ಜಾತಿ, ಪ.ಪಂಗಡದ ಹೊಸ ಮೀಸಲಾತಿಯಲ್ಲಿ ಶೇ.17 ಮತ್ತು ಶೇ.7ರಷ್ಟು ಮೀಸಲಾತಿಯಂತೆಯೇ ಹುದ್ದೆಗಳನ್ನು ನೇಮಕಾತಿ ಮಾಡಕೊಳ್ಳಬೇಕಿದೆ. ಒಂದು ವೇಳೆ ನಮ್ಮ ಬೇಡಿಕೆಗಳ ವಿರುದ್ಧ ರಾಜ್ಯ ಸರ್ಕಾರ ನೇಮಕಾತಿ ನಡಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮದಕರಿ ಸೇನೆಯ ತಾಲೂಕು ಅಧ್ಯಕ್ಷ ಹಾಗೂ ವೈದ್ಯ ಡಾ.ಓಂಕಾರ್‌ನಾಯಕ ಮಾತನಾಡಿ, ಈ ಹಿಂದೆ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ 240ಕ್ಕೂ ಹೆಚ್ಚುದಿನ ಮೀಸಲಾತಿ ಹೆಚ್ಚಳಕ್ಕಾಗಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಲಾಗಿತ್ತು. ಅಂದಿನ ಬೆಜೆಪಿ ರಾಜ್ಯ ಸರ್ಕಾರ 2011 ಜನಗಣತಿ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿಯನ್ನು 2022ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಹೆಚ್ಚಿಸಿ ಅನುಮೋದನೆ ನೀಡಿತ್ತು. ಆದರೆ ನಂತರ ಬಂದ ಸರ್ಕಾರಗಳು ಸಂವಿಧಾನ ಬದ್ಧವಾಗಿ ತರಲಾಗಿದ್ದ ಮೀಸಲಾತಿಯನ್ನು 9ನೇ ಅನುಚ್ಛೇದಕ್ಕೆ ಸೇರಿಸದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನ್ಯಾಯ ಮಾಡಲು ಹೊರಟಿರುವುದು ಖಂಡನೀಯ ಎಂದರು.
ವಾಲ್ಮೀಕಿ ಯುವಕರ ಸಂಘದ ಅಧ್ಯಕ್ಷ ನರಸಿಂಹಕೃಷ್ಣ ಮಾತನಾಡಿ ಪ.ಜಾತಿ, ಪ.ಪಂಗಡಗಳಿಗಾಗಿ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸುತ್ತಿದೆ. ಇದರಿಂದಾಗಿ ಸಮುದಾಯದ ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.
ರಾಧಾರಾಜಗೋಪಾಲ್, ರಾಮಸ್ವಾಮಿ, ದಿವಾಕರಪ್ಪ, ಬೇಕರಿ ನಾಗರಾಜ್, ಎತ್ತಿನಹಳ್ಳಿ ಈರಪ್ಪ, ಹೊಸದುರ್ಗ ಸತ್ಯನಾರಾಯಣಪ್ಪ, ಓಬಳಪ್ಪ, ಮದಕರಿ ಬ್ಯಾಂಕ್ ಕೃಷ್ಣಮೂರ್ತಿ, ನಾಗರಾಜ್, ಚಿತ್ತಾನಹಳ್ಳಿ ಚಂದ್ರು, ಅಂಜಿನಾಯಕ, ಮಂಜುನಾಥ್ ಪಾಳೇಗಾರ, ಮಲ್ಲಿಕಾರ್ಜುನ್. ಅಂಬಿಕಾರಮೇಶ್, ಓಂಕಾರನಾಯಕ, ಭಾಸ್ಕರನಾಯಕ, ಕರವೇ ಲಕ್ಷ್ಮೀನಾರಾಯಣ, ಬ್ಯಾಡನೋರ್ ಶಿವು, ಕಣಿವೆನಹಳ್ಳಿ ಮಲ್ಲಿ, ಭರರ್‌ಪಾಳೇಗಾರ್, ನರಸಿಂಹಮೂರ್ತಿ, ದಾಸನಾಯಕ, ಮಂಜುನಾಥ್, ರಾಂಪುರ ರಮೇಶ್ ಇತರರಿದ್ದರು.