ದೊಡ್ಡಬಳ್ಳಾಪುರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ತಹಸೀಲ್ದಾರ್ ಮಲ್ಲಪ್ಪ.ಕೆ ಯರಗೋಳ, ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ತ.ನ.ಪ್ರಭುದೇವ್, ತಾಲೂಕು ಕಸಾಪ ಅಧ್ಯಕ್ಷ ಗೋವಿಂದರಾಜು ಇತರರು ಇದ್ದರು.
ದೊಡ್ಡಬಳ್ಳಾಪುರ : ರಾಜ್ಯದ ಕನ್ನಡ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಭಾಷಾ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಭಾಷಾ ನೀತಿಯ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮಲ್ಲಪ್ಪ.ಕೆ ಯರಗೋಳ ಅವರ ನೇತೃತ್ವದಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ತಾಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಅಯೋಜಿಸಲಾಗಿತ್ತು.
ತಹಸೀಲ್ದಾರ್ ಮಲ್ಲಪ್ಪ.ಕೆ ಯರಗೋಳ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೂತನವಾಗಿ "ಕನ್ನಡ ಜಾಗೃತಿ ಸಮಿತಿ' ಸದಸ್ಯರನ್ನು ನೇಮಕ ಮಾಡಿದೆ. ಸದಸ್ಯರ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುವ ಕುರಿತು ಆಡಳಿತದ ಎಲ್ಲ ಹಂತಗಳಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂಬುದು "ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯ ಎಂದರು.
ಈ ದಿಸೆಯಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಕನ್ನಡ ಪರ ಸಂಘ&ಸಂಸ್ಥೆಗಳು ಒಂದುಗೂಡಿ ಮಾ.31ರಂದು ದೊಡ್ಡಬಳ್ಳಾಪುರದ ಕನ್ನಡ ಜಾಗೃತಿ ಪರಿಷತ್ತಿನಲ್ಲಿ "ಕನ್ನಡ ಜಾಗೃತಿ ಸಭೆ' ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ ಕನ್ನಡ ಪರ ಮನಸ್ಸುಳ್ಳವರ ಒಂದು ಉಪಸಮಿತಿ ರಚಿಸುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಒಳಗೊಂಡಂತೆ ಉಪಸಮಿತಿಗೆ ಸದಸ್ಯರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ ಆಯುಕ್ತರು, ಕನ್ನಡ ಮತ್ತು ಸಂಸತಿ ಇಲಾಖೆ ಅಧಿಕಾರಿಗಳು, ಗ್ರಾಮಾಂತರ ಮತ್ತು ನಗರ ಸರ್ಕಲ್ ಇನ್ಸ್ಪೆಕ್ಟರ್, ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ತ.ನ.ಪ್ರಭುದೇವ್, ತಾಲೂಕು ಕಸಾಪ ಅಧ್ಯಕ್ಷ ಗೋವಿಂದರಾಜು, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಆಂಜನೇಯ, ಪತ್ರಕರ್ತ ಡಿ.ಶ್ರೀಕಾಂತ್, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಕೆ.ಮಹಾಲಿಂಗಯ್ಯ, ನಾಗರತ್ನಮ್ಮ, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಕನ್ನಡ ಪಕ್ಷದ ಸಂಜೀವ ನಾಯಕ, ಕಸಾಪ ಜಿಲ್ಲಾ ಕಾರ್ಯದರ್ಶಿ ರಾಜಘಟ್ಟ ರವಿ, ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಚೌಡರಾಜು, ಡಾ.ರಾಜ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಪರಮೇಶ್, ತಾಲೂಕು ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್, ರಾಜ್ ಕುಮಾರ್ ಸಂಘದ ಸು.ನರಸಿಂಹಮೂರ್ತಿ, ಕನ್ನಡ ಪಕ್ಷದ ಅಧ್ಯಕ್ಷ ಡಿ.ವೆಂಕಟೇಶ್, ಕರವೇ ಚುರುಮುರಿ ಆರಾಧ್ಯ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್, ಕಲಾವಿದರಾದ ಕಿಶೋರ್, ಶಿವರಾಜ್ ಒಳಗೊಂಡಂತೆ ಸಮಿತಿ ರಚಿಸಲಾಯಿತು.