ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ crop 
ರಾಜ್ಯ

ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ crop

ಕೆಜಿಎಫ್​: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದಾಗಿ ಸುಮಾರು 600 ಎಕರೆಗೂ ಮಿಗಿಲಾದ ಮಾವು ಮತ್ತು ಬಾಳೆ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ತಾಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸೀಲ್ದಾರ್​ ಭರತ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.crop
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಅಭಿಲಾಷ್​ ರೆಡ್ಡಿ ಮಾತನಾಡಿ, ಕ್ಯಾಸಂಬಳ್ಳಿ ಹೋಬಳಿ ಜಕ್ಕರಸಕುಪ್ಪ, ಕಂಗಾಂಡ್ಲಹಳ್ಳಿ, ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿ ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ ಮಾವು ಇದ್ದು, 4 ಸಾವಿರ ಕುಟುಂಬಗಳು ಮಾವು ಬೆಳೆಯನ್ನೇ ಅವಲಂಬಿಸಿದ್ದಾರೆ. ಹಿಂದೆ ಮಾವು ಬೆಳೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುತ್ತಿದ್ದರು. ಇತ್ತೀಚೆಗೆ ರೈತರೇ ನಿರ್ವಹಣೆ ಮಾಡುತ್ತಿದ್ದು, ಪ್ರತಿ ಎಕರೆ ನಿರ್ವಹಣೆಗಾಗಿ ಕನಿಷ್ಠ 50 ಸಾವಿರ ರೂ. ವೆಚ್ಚವಾಗುತ್ತದೆ. ಈಗ ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟವಾಗಿದ್ದು, ಮಾವು ಬೆಳೆದ ರೈತರಿಗೆ ಕನಿಷ್ಠ ಪಕ್ಷ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.