ಕಲುಷಿತಗೊಂಡ ಕೆಂಭಾವಿ ಪಟ್ಟಣದ ರೇವಣಸಿದ್ಧೇಶ್ವರ ಬಾವಿ. 
ರಾಜ್ಯ

ರೇವಣಸಿದ್ದೇಶ್ವರ ವಾವಿ ಸ್ವಚ್ಛತೆಗೆ ಆಗ್ರಹ

ಕೆಂಭಾವಿ: ಪಟ್ಟಣದ ವಿವಿಧ ಬಡಾವಣೆಗಳಿಗೆ ನೀರು ಪೂರೈಸುತ್ತಿರುವ ರೇವಣಸಿದ್ಧೇಶ್ವರ ಬಾವಿ ಸಂಪೂರ್ಣ ಕಲುಷಿತಗೊಂಡು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹೀಗಾಗಿ ಈ ಬಾವಿಯ ನೀರು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಪುರಾತನ ಕಾಲದ ಈ ಬಾವಿ ಅನೇಕ ವರ್ಷಗಳಿಂದ ಜನತೆಗೆ ಕುಡಿಯುವ ನೀರೊದಗಿಸುವ ಮುಖ್ಯ ಸೆಲೆಯಾಗಿದ್ದು ಕಳೆದ ಹಲವು ತಿಂಗಳಿನಿಂದ ಈ ಬಾವಿ ಪಾಚಿ ತುಂಬಿ ಸುತ್ತಮುತ್ತಲಿನ ಪ್ರದೇಶ ಮಲಿನವಾಗಿದ್ದು, ಸ್ಥಳಿಯ ಪುರಸಭೆ ಆಡಳಿತ ಸಂಪೂರ್ಣ ರ್ನಿಲಕ್ಷ ವಹಿಸಿದೆ ಎಂದು ಬಡಾವಣೆಯ ನಿವಾಸಿ ವೀರೇಶ ಟಕ್ಕಳಿಕಿ ಆರೋಪಿಸಿದ್ದಾರೆ.
ಕೇವಲ ಜನರಿಗಷ್ಟೇ ಅಲ್ಲದೆ ಹಳೆಯ ಬಸ್​ ನಿಲ್ದಾಣ ಪ್ರದೇಶದ ಹಲವು ಹೋಟೆಲ್​ಗಳಿಗೂ ಈ ಬಾವಿ ನೀರು ಆಸರೆಯಾಗಿತ್ತು. ಅಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಏಕೈಕ ಬಾವಿ ಇದೀಗ ಪಾಚಿ ತುಂಬಿ ಮಲಿನವಾಗುತ್ತಿದ್ದು, ಜನರು ಈ ನೀರನ್ನು ತಮ್ಮ ಮನೆಗಳಿಗೆ ಹೊತ್ತೊಯ್ಯತಿರುವುದರಿಂದ ಮುಂಬರುವ ದಿನಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.
ಹೀಗಾಗಿ ಕೂಡಲೇ ಪುರಸಭೆ ವಿಶೇಷ ಕಾಳಜಿ ವಹಿಸಿ ಬಾವಿಯಲ್ಲಿನ ನೀರು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಬೇಕು ಎಂದು ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.