ಸೂಲಿಬೆಲೆ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋವಧೆ ಹಾಗೂ ಗೋಮಾಂಸ ಮಾರಾಟ ಚಟುವಟಿಕೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಮಸೀದಿಗಳ ಮುಖ್ಯಸ್ಥರು ಸೂಲಿಬೆಲೆ ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ಮುಖಂಡ ಅಕ್ಬರ್ ಅಲಿಖಾನ್, ಚೌಕ್ ಮಸೀದಿ ಅಧ್ಯಕ್ಷ ಮೌಲ, ಮುಬಾರಕ್ ಮಸೀದಿ ಅಧ್ಯಕ್ಷ ದೌಲತ್, ಜಾಮಿಯ ಮಸೀದಿ ಅಧ್ಯಕ್ಷ ಅಪೋಜ್ ಪಾಷ ಇತರರು ಇದ್ದರು.
ಸೂಲಿಬೆಲೆ : ಸೂಲಿಬೆಲೆ ಗ್ರಾಮದಲ್ಲಿ ಗೋವಧೆ ಹಾಗೂ ಅಕ್ರಮ ಗೋಮಾಂಸ ಮಾರಾಟ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೂಲಿಬೆಲೆ ಗ್ರಾಮದ ಮಸೀದಿಗಳ ಮುಖ್ಯಸ್ಥರು ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಎಲ್ಲ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಜೀವಿಸುತ್ತಿದ್ದು ಪರಸ್ಪರ ಸ್ನೇಹದಿಂದ ಇದ್ದಾರೆ. ಆದರೆ, ಗೋಮಾಂಸ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದವರ ವ್ಯಕ್ತಿ ಕೊಲೆಯಿಂದ ಗ್ರಾಮದಲ್ಲಿ ಜನ ಭಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಜನರಿಗೆ ಅಭಯ ನೀಡಬೇಕು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯಾವುದೇ ವ್ಯಕ್ತಿಯ ಗೋಮಾಂಸ ಮಾರಾಟ ಮಾಡುವಂತಿಲ್ಲ ಎಂಬುದಾಗಿ ಗ್ರಾಮದ 7 ಮಸೀದಿಗಳಲ್ಲಿ ನಿರ್ಧರಿಸಿ ಆದೇಶಿಸಲಾಗಿದೆ. ಗೋಮಾಂಸ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಾಪಾರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗೋಮಾಂಸ ಮಾರಾಟ ಅಂಗಡಿಗಳನ್ನು ಸೂಲಿಬೆಲೆ ಗ್ರಾಮದಲ್ಲಿ ಶಾಶ್ವತವಾಗಿ ಮುಚ್ಚಿಸಬೇಕು ಎಂದು ಜಾಮೀಯ ಮಸೀದಿಯಅಹೀಲ್ ಸುನತುಲ್ಲಾಜಮಾತ್ ಅಧ್ಯಕ್ಷ ಅಪೋಜ್ ಪಾಷ ಆಗ್ರಹಿಸಿದ್ದಾರೆ.
ಇತ್ತೀಚಿಗೆ ಕೊಲೆಯಾದ ಕಲಿಂ ಅವರ ಸಾವಿಗೆ ನ್ಯಾಯಸಿಗಬೇಕು. ಆ ವ್ಯಕ್ತಿಯ ಸಾವಿಗೆ ಕಾರಣ ಎನ್ನಲಾದ ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ವಿನಾಯಿತಿ ಸಿಗಬಾರದು, ಕಠಿಣ ಶಿೆಯಾಗಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಪರಿಶೀಲಿಸಿ ಕ್ರಮ : ಮನವಿ ಸ್ವೀಕರಿಸಿದ ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಮಾತನಾಡಿ, ಸೂಲಿಬೆಲೆ ಗ್ರಾಮದಲ್ಲಿ ಅಕ್ರಮವಾಗಿ ಗೋವಧೆ ಮತ್ತು ಗೋ ಮಾಂಸ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಪರವಾನಗಿ ಪಡೆದು ವ್ಯಾಪಾರ ಮಾಡಲು ಅವಕಾಶವಿದೆಯೇ ಹೇಗೆ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಉಮರ್ ಮಸೀದಿ ಅಧ್ಯಕ್ಷ ಪಯಾಜ್, ನಯಾಜ್ ಪಾಷ, ನಸೀರ್ ಪಾಷ, ಸಲ್ಮಾನ್, ಸಾದಿಕ್, ಇಸಾಕ್ ಪಾಷ, ಸಿಮೆಂಟ್ ನಾಸೀರ್ ಖಾನ್, ರಫಿ, ಮಸೀದಿ ಪದಾಧಿಕಾರಿಗಳು ಇತರರು ಇದ್ದರು.
ಸೂಲಿಬೆಲೆ ಗ್ರಾಮದ 1ನೇ ವಾರ್ಡ್ನಲ್ಲಿ ತಡರಾತ್ರಿ ಕಬಾಬ್ ಅಂಗಡಿಗಳನ್ನು ನಡೆಸುವುದು ಹಾಗೂ ಕುಡುಕರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಸಮಯ ನಿಗದಿ ಮಾಡಿ ಕಡಿವಾಣ ಹಾಕಬೇಕು.
— > ನಾಸೀರ್, ಯುವ ಮುಖಂಡ, 1ನೇ ವಾರ್ಡ್