ಈ ಸಾಲಿನ ಬಜೆಟ್ನಲ್ಲಿ ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಒತ್ತಯಿಸಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.
ಕಲಬುರಗಿ: ಈ ಸಾಲಿನ ಬಜೆಟ್ನಲ್ಲಿ ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಭೇಟಿ ಮಾಡಿ ಸಲ್ಲಿಸಿರುವ ಪತ್ರದಲ್ಲಿ, ಕಕ ಭಾಗದ ಈಚಲು ಮರ ಕೆತ್ತುವ ಕುಲಕಸಬು ಹೊಂದಿದ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಎಂದು ಟ್ರೀ ಫಾರ ಟ್ಯಾಪರ್ಸ್ ವ್ಯವಸ್ಥೆ ಜಾರಿಗೊಳಿಸಿ ನೀರಾ ಮತ್ತು ಸೇಂದಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಎಂಎಸ್ಐಎಲ್ ಮಳಿಗೆಗಳಲ್ಲಿ ಈಡಿಗ ಸೇರಿ 26 ಪಂಗಡಗಳಿಗೆ ಕೆಲಸ ಕಲ್ಪಿಸುವುದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಈಚಲು ಮರ ಕೆತ್ತುವ ಕುಲಕಸಬು ಕಳೆದುಕೊಂಡ ಕಾರ್ಮಿಕರಿಗೆ ಎಂಎಸ್ಐಎಲ್ ಮಳಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಲ್&2, ಸಿಎಲ್&9 ಮಳಿಗೆಗಳಲ್ಲಿ (ಅಬಕಾರಿ ಸನ್ನದು) ಶೇ.30 ರಷ್ಟು ತೆಲಂಗಾಣ ಮಾದರಿಯಲ್ಲಿ ಈಡಿಗ ಸಮುದಾಯಕ್ಕೆ ಮೀಸಲಿಡಬೇಕು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು 12ನೇ ಶತಮಾನದ ಬಸವಣ್ಣನವರ ಒಡನಾಡಿಯಾಗಿ ಕಾರ್ಯನಿರ್ವಹಿಸಿದ ಶರಣರಾಗಿರುವ ಹೆಂಡದ ಮಾರಯ್ಯನವರ ಮತ್ತು ಈಡಿಗ ಅಕ್ಕಮ್ಮನವರ ಜಂಟಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಗುತ್ತೇದಾರ ಆಗ್ರಹಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರೂ. ಅನುದಾನ ಒದಗಿಸಬೇಕು, ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದ ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು, ಕಲಬುರಗಿಯಲ್ಲಿ ಈಡಿಗ ಸಮುದಾಯ ಭವನ, ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ 5 ಎಕರೆ ಸರ್ಕಾರಿ ಜಾಗ ನೀಡಬೇಕು. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ವಲಸೆ ಹೋಗಿರುವ ಈಡಿಗ ಸಮುದಾಯದ ಜನರು ಕರ್ನಾಟಕಕ್ಕೆ ಮತ್ತೆ ವಾಪಸ್ ಬರುವ ದಿಸೆಯಲ್ಲಿ ಈ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕೋರಿದ್ದಾರೆ.