- *ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಪತ್ರ
ಬೆಂಗಳೂರು: ಜೀವ ರಕ್ಷಕ ಔಷಧಗಳ ಕುರಿತು ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿರುವ ಹಾಗೂ ಅಸಹಜ ರಿಯಾಯಿತಿ ಫಲಕಗಳ ಪ್ರದರ್ಶಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಫಾರ್ಮ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಆಗ್ರಹಿಸಿದೆ.
ಈ ವಿಚಾರವಾಗಿ ಸಂಘದ ಅಧ್ಯಕ್ಷ ಸಿ. ಜಯರಾಂ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಔಷಧಗಳ ಬಗ್ಗೆ ಉತ್ಪ್ರೇಕ್ಷಿತ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಅಸಹಜ ಮತ್ತು ಭಾರಿ ರಿಯಾಯಿತಿ ಫಲಕಗಳನ್ನು ಅಳವಡಿಸಿ, ಜನರ ದಾರಿ ತಪ್ಪಿಸಲಾಗುತ್ತಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಲಾಭದ ಗಡಿ ಗೊತ್ತುಪಡಿಸಿದೆ. ಆದರೆ, ಬಹುರಾಷ್ಟ್ರೀಯ ಕಂಪನಿಗಳು ದಾರಿ ತಪ್ಪಿಸುವ ಜಾಹೀರಾತುಗಳ ನೀಡಿ, ರಿಯಾಯಿತಿ ದರದಲ್ಲಿ ಜೀವರಕ್ಷಕ ಔಷಧಗಳನ್ನು ಮಾರಾಟ ಮಾಡುತ್ತಿವೆ. ಈ ಬೆಳವಣಿಗೆ ಔಷಧ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಔಷಧ ಮಳಿಗೆಗಳ ಸ್ಥಾಪನೆ ಹಾಗೂ ನವೀಕರಣದ ವೇಳೆ ಮಳಿಗೆಗಳ ಹೊರಭಾಗದಲ್ಲಿ ಯಾವುದೇ ರಿಯಾಯಿತಿ ಫಲಕಗಳನ್ನು ಪ್ರದರ್ಶಿಸುವುದಿಲ್ಲ ಎಂಬ ಬಗ್ಗೆ ಮಳಿಗೆ ಮಾಲೀಕರು ಪ್ರಮಾಣಪತ್ರ ಸಲ್ಲಿಸಬೇಕೆಂದು ಸೂಚಿಸಿ ಕೇರಳ ರಾಜ್ಯದ ಔಷಧ ನಿಯಂತ್ರಕರು 2024ರ ಸೆ. 4ರಂದು ಐತಿಹಾಸಿಕ ಸುತ್ತೋಲೆ ಹೊರಡಿಸಿದ್ದರು.
ಜೀವ ರಕ್ಷಕ ಔಷಧಗಳ ಮೇಲೆ ದಾರಿ ತಪ್ಪಿಸುವ ಜಾಹೀರಾತು ಹಾಗೂ ಅಸಹಜ ರಿಯಾಯಿತಿ ಲಕ ಅಳವಡಿಸದಿರುವ ಬಗ್ಗೆ ಪ್ರಮಾಣ ಪತ್ರಗಳನ್ನು ನೀಡುವಂತೆಯೂ ಆದೇಶ ಹೊರಡಿಸಿದ್ದರು. ಈ ಷರತ್ತನ್ನು ನ್ಯಾಯಾಲಯವೂ ಪುರಸ್ಕರಿಸಿತ್ತು. ರಾಜ್ಯದಲ್ಲಿಯೂ ಇದೇ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.