ಕಲಬುರಗಿ ಜಿಪಂ ಹೊಸ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ನೇತೃತ್ವದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಿಇಒ ಭಂವರಸಿಂಗ್ ಮೀನಾ, ವಿಜಯಕುಮಾರ ಕಟ್ಟಿಮನಿ ಇತರರಿದ್ದರು.
- ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಸೂಚನೆ
- ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ
ಕಲಬುರಗಿ: ಜಿಲ್ಲೆಯ ಹಳ್ಳಿ ಹಳ್ಳಿಗೂ ಹೋಗಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಮಾಡಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯೆ ಚಂದ್ರಿಕಾ ಪರಮೇಶ್ವರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಲಾನುಭವಿಗಳು ನಮ್ಮ ಬಳಿ ಬರುವುದಕ್ಕಿಂತ ಮೊದಲು ನಾವು ಅವರ ಬಳಿ ಹೋಗಿ ಸಮಸ್ಯೆ ಪರಿಹರಿಸಬೇಕು. ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರಿಗೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಗೃಹಲಕ್ಷಿ$್ಮ ಯೋಜನೆ ಬಗ್ಗೆ ಹಲವಾರು ಗೊಂದಲಗಳಿವೆ. ಮುಂದಿನ ದಿನಗಳಲ್ಲಿ ಈ ಗೊಂದಲಕ್ಕೆ ತೆರೆ ಎಳೆಯದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಯೋಜನೆಗಳ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿದರು.
ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷಿ$್ಮ ಹಾಗೂ ಯುವನಿಧಿ ಯೋಜನೆಗಳ ಎಷ್ಟು ಫಲಾನುಭವಿಗಳು ಯೋಜನೆಗಳ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕುವಾರು ಮಾಹಿತಿ ನೀಡಲು ತಿಳಿಸಿದರು.
ಜಿಪಂ ಸಿಇಒ ಭಂವರಸಿಂಗ್ ಮೀನಾ ಮಾತನಾಡಿ, ರೇಷನ್ ಕಾರ್ಡ್, ಆಧಾರ ಕಾರ್ಡ್ ತಿದ್ದುಪಡಿಯಂತಹ ಇಕೆವೈಸಿ ತಾಂತ್ರಿಕ ಸಮಸ್ಯೆ ಸರಿಪಡಿಸಿ ಪ್ರತಿಯೊಬ್ಬ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆ ಇರುವುದರಿಂದ ಸರಿಯಾಗಿ ವಿದ್ಯುತ್ ನೀಡಬೇಕು. ಸಾರ್ವಜನಿಕರು ಸಮಸ್ಯೆ ಎಂದು ಸಹಾಯವಾಣಿಗೆ ಕರೆ ಮಾಡಿದಾಗ ಆಡುಭಾಷೆಯಲ್ಲಿ ಮಾತನಾಡಬೇಕು. ಸಾರ್ವಜನಿಕರಿಗೆ ಸಮಸ್ಯೆ ಬಗ್ಗೆ ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಸಹಾಯವಾಣಿಯಲ್ಲಿ ಮಾತನಾಡಲು ತರಬೇತಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಧಿಕಾರದ ಉಪಾಧ್ಯಕ್ಷ ನರಸಿಂಹಲು ಕುಂಬಾರ ಮಾತನಾಡಿದರು. ಅನುಷ್ಠಾನ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್ ಕಟ್ಟಿಮನಿ, ನಿರ್ಮಲಾ ಬಗಲಿ, ಸುರೇಶ್ ತಿಪ್ಪಶೆಟ್ಟಿ ಇತರರಿದ್ದರು.