ಚನ್ನರಾಯಪಟ್ಟಣ ತಾಲೂಕಿನ ಬರಗೂರು ಗ್ರಾಮಕ್ಕೆ ಸಚಿವ ಕೆ. ಎಂ.ಶಿವಲಿಂಗೇಗೌಡ ಭೇಟಿ ನೀಡಿ ಮುಸುಕಿನ ಜೋಳಕ್ಕೆ ತಗುಲಿರುವ ಬಿಳಿಸುಳಿ ರೋಗದ ದಾಟುಗಳನ್ನು ವೀಕ್ಷಣೆ ಮಾಡಿದರು. ಶ್ರೇಸ್ ಪಟೇಲ್, ಎಂ.ಎ.ಗೋಪಾಲಸ್ವಾಮಿ, ಲತಾಕುಮಾರಿ, ಪಿ. ರಮೇಶ್, ಕೆ.ಮೋಹನ್‌ಕುಮಾರ್ ಇದ್ದರು. 
ರಾಜ್ಯ

ಬೆಳೆ ವಿಮೆ ಹಣ ಪ್ರಾಮಾಣಿಕವಾಗಿ ತಲುಪಿಸಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ಎಂ.ಶಿವಲಿಂಗೇಗೌಡ
  • ಜಿಲ್ಲೆ ಬರಪೀಡಿತವಾಗಿರುವುದರಿಂದ ರೈತರು ಬೆಳೆ ಬಿತ್ತಲಾಗಿಲ್ಲ

ಚನ್ನರಾಯಪಟ್ಟಣ:

ಜಿಲ್ಲೆ ಬರಪೀಡಿತವಾಗಿರುವುದರಿಂದ ರೈತರು ಬೆಳೆ ಬಿತ್ತಲಾಗಿಲ್ಲ. ಇನ್ನೊಂದೆಡೆ ಬಿತ್ತಿದ ಬೆಳೆ ಮಳೆಯಿಲ್ಲದೆ ಒಣಗಿದ್ದು. ಹಾಗಾಗಿ ಅಧಿಕಾರಿಗಳು ಬೆಳೆ ವಿಮೆ ಪರಿಹಾರದ ಹಣವನ್ನು ಪ್ರಾಮಾಣಿಕವಾಗಿ ನೀಡುವ ಮೂಲಕ ರೈತರನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ತಾಲೂಕಿಗೆ ಆಗಮಿಸಿದ ಅವರು, ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಮುಸುಕಿನ ಜೋಳಕ್ಕೆ ತಾಗಿರುವ ಬಿಳಿಸುಳಿ ರೋಗದ ದಾಟುಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು. ರೈತರು ಸತತವಾಗಿ ಒಂದೇ ತೆರೆನಾದ ಬೆಳೆಯನ್ನು ಬೆಳೆಯುವುದರಿಂದ ಜೋಳದಲ್ಲಿ ಬಿಳಿಸುಳಿ ರೋಗ ಕಂಡುಬರುತ್ತಿದೆ. ಮಣ್ಣಿನಲ್ಲಿರುವ ರೋಗಾಣುಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳೆ ಪರಿವರ್ತನೆ ಅಗತ್ಯ ಈ ಮೂಲಕ ರೋಗಮುಕ್ತ ಬೆಳೆ ಬೆಳೆಯಬೇಕು ಎಂದರು.
ಮುಂಗಾರು ಸಂಪೂರ್ಣ ಕೈಕೊಟ್ಟಿದು, ಹಿಂಗಾರು ಮಳೆ ಬೀಳುವ ಲಕ್ಷಣಗಳಿಲ್ಲ. ಹಾಗಾಗಿ ರೈತರನ್ನು ಉಳಿಸಿಕೊಳ್ಳುವ ಸಂಪೂರ್ಣ ಹೊಣೆ ಸರ್ಕಾರದ್ದಾಗಿದೆ. ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ವಿಮೆ ಕಟ್ಟಿರುವ ರೈತರಿಗೆ ಮೊದಲ ಹಂತದಲ್ಲಿ ಪರಿಹಾರ ಹಣವನ್ನು ವಿಮಾ ಕಂಪನಿ ಪಾವತಿಸಬೇಕು. ಎನ್‌ಡಿಆರ್‌ಎಫ್ ನಿಯಮದಂತೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಎರಡನೇ ಹಂತದ ಪರಿಹಾರವನ್ನು ಸರ್ಕಾರ ರೈತರಿಗೆ ನೀಡಲಿದೆ. ಇದೀಗ ಮೊದಲ ಹಂತದ ಹಣವನ್ನು ಶೀಘ್ರ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಮೆ ಕಂಪನಿ ಮುಖ್ಯಸ್ಥರು ತಮ್ಮನ್ನು ಭೇಟಿ ಮಾಡಬೇಕು. ವಿಮೆ ಏಜೆಂಟ್‌ಗಳೊಂದಿಗೆ ನಾನು ಮಾತನಾಡುವುದಿಲ್ಲ. ವಿಮೆ ಹಣವನ್ನು ರೈತರ ಹೊಲಗಳಿಗೆ ಹೋಗಿ ನೀಡಬೇಕು. ಜತೆಗೆ ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ನಿರಂತರ ಭೇಟಿ ನೀಡಿ ಸತತ ಒಂದೇ ತೆರೆನಾದ ಬೆಳೆಯನ್ನು ಬೆಳೆಯದಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ರಾಜ್ಯದಲ್ಲಿ ಬರದ ಛಾಯೆ ಮೂಡಿದ್ದು, ಮೊದಲ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿಗಳು ಬರಗಾಲದ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸಮೀಕ್ಷೆ ನಡೆಸಿ, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ. ಆ.13ರಿಂದ ಆರಂಭವಾಗುವ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ರೈತರನ್ನು ಉಳಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್, ಕವಿಕಾ ಅಧ್ಯಕ್ಷ ಲಲಿತ್‌ರಾಘವ್, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯುವರಾಜ್, ತಹಸೀಲ್ದಾರ್ ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್‌ಕುಮಾರ್ ಇತರರಿದ್ದರು.