ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸುವಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರಧಾನಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಒತ್ತಾಯಿಸಿ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಪಂಚಪ್ಪ ಕಲಬುರ್ಗಿ, ಎಸ್.ವಿ. ಪಾಟೀಲ ಮತ್ತಿತರರಿದ್ದಾರೆ.
- ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಣಯ
- ಸಂಸದರಿಗೆ ಮನವಿ ಸಲ್ಲಿಕೆ
ವಿಜಯಪುರ: ನ್ಯಾ. ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ಹಾಗೂ ಗೇಟ್ ಅಳವಡಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲು ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ಹೋರಾಟ ಸಮಿತಿ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಹೋಗಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ರೈತಪರ, ದಲಿತಪರ ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟಕ್ಕಾಗಿ ಕೃಷ್ಣಾ ಕೊಳ್ಳ ಜಲ ರಕ್ಷಣಾ ಹೋರಾಟ ಸಮಿತಿ ರಚಿಸಲಾಯಿತು.
ಅಲ್ಲದೇ, ಸಭೆಯ ನಂತರ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ತೆರಳಿ ಪ್ರಧಾನಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ದಿನಾಂಕ ನಿಗದಿ ಪಡಿಸಲು ಹೋರಾಟ ಸಮಿತಿ ಮುಖಂಡರು ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನೀರಾವರಿ ವಿಷಯದಲ್ಲಿ ಯಾವುದೇ ಜಾತಿ ರಾಜಕಾರಣ ಬೇಡ ಜಲಾಶಯ ನೀರಿನ ಮಟ್ಟವನ್ನು ಹೆಚ್ಚಿಸಲು ನ್ಯಾಯಾಧೀಕರಣ ತೀರ್ಪಿನಂತೆ ಅಧಿಸೂಚನೆ ಹೊರಡಿಸಲು ಪ್ರಧಾನ ಮಂತ್ರಿ ಬಳಿ ನಿಯೋಗ ತಗೆದುಕೊಂಡು ಹೋಗಲು ಬಾಗಲಕೋಟೆ ಸಂಸದರಾದ ಪಿ.ಸಿ. ಗದ್ದಿಗೌಡರ ಸೇರಿ ಇನ್ನುಳಿದ ಸಂಸದರನ್ನು ಕರೆದುಕೊಂಡು ಮೊದಲು ಪ್ರಲ್ಹಾದ ಜೋಶಿ ಅವರಿಗೆ ಭೇಟಿಯಾಗಿ ಪ್ರಧಾನ ಮಂತ್ರಿ ಬಳಿ ನಿಯೋಗಕ್ಕೆ ದಿನಾಂಕ ನಿಗದಿಪಡಿಸಲು ಶೀಘ್ರದಲ್ಲೇ ಭೇಟಿಯಾಗೋಣ ಎಂದು ಭರವಸೆ ನೀಡಿದರು.
ನೀರಾವರಿ ತಜ್ಞ ಡಾ. ರಾಜೇಂದ್ರ ಪೊದ್ಧಾರ ಮಾತನಾಡಿ, ಅವಳಿ ಜಿಲ್ಲೆಯ ರೈತರ ಜಮೀನುಗಳಿಗೆ ಸಮಗ್ರ ನೀರಾವರಿ ಆಗಲು 524.256ಕ್ಕೆ ನೀರು ನಿಲ್ಲಿಸಬೇಕೆಂದರೆ ಕೇಂದ್ರ ಸರ್ಕಾರ ಮೊದಲು ಅಧಿಸೂಚನೆ ಹೊರಡಿಸಬೇಕು. ನಂತರ ರಾಜ್ಯ ಸರ್ಕಾರ ಮೂರನೇ ಹಂತದ ಯೋಜನೆಗೆ ತಗುಲುವ ಹಣವನ್ನು ಭರಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಬಳಿ ನಿಯೋಗ ತಗೆದುಕೊಂಡು ಹೋಗಿ ಭೇಟಿಯಾಗಿ ಒತ್ತಾಯಿಸಲಾಗುವುದು ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮತ್ತು ಮುಖಂಡ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ಹೋರಾಟ ಸಮಿತಿಯ ಪ್ರಮುಖರಾದ ಅರವಿಂದ ಕುಲಕರ್ಣಿ, ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾ. ಬಿ.ಸಿ. ಬಿರಾದಾರ, ಪಂಚಪ್ಪ ಕಲಬುರ್ಗಿ, ಎಸ್.ವಿ. ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಭೀಮಶಿ ಕೊಕರೆ, ಚಾಣಕ್ಯ ಕರಿಯರ್ ಅಕಾಡೆಮಿಯ ಅಧ್ಯಕ್ಷ ಎಂ.ಎನ್. ಬಿರಾದಾರ, ಅಣ್ಣಾರಾಯ ಈಳಗೇರ, ಬಿ. ಭಗವಾನ ರಡ್ಡಿ, ಭರತಕುಮಾರ ಎಚ್.ಟಿ., ಮಲ್ಲಿಕಾರ್ಜುನ ಎಚ್.ಟಿ., ಉಮೇಶ ವಾಲಿಕಾರ, ರಾಮನಗೌಡ ಬಿರಾದಾರ, ಭಾಗಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ಲಕ್ಷ್ಮಣ ಹಂದ್ರಾಳ, ಮಲ್ಲನಗೌಡ ಡೋಮನಾಳ, ಗುರುನಾಥ ಬಗಲಿ, ಭೋಗೇಶ ಸೊಲ್ಹಾಪುರ ಮತ್ತಿತರರಿದ್ದರು.