SC-ST Reservation | ಎಸ್‌ಸಿ/ಎಸ್‌ಟಿ ಮೀಸಲಾತಿ ಜಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ವಾಲ್ಮೀಕಿ ಶ್ರೀಗಳ ನಿಯೋಗದಿಂದ ಮನವಿ
ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ (SC-ST Reservation) ಅಧಿನಿಯಮ-2022ರ ಅಡಿಯಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ. 17 ಹಾಗೂ ಎಸ್‌ಟಿ ಸಮುದಾಯಕ್ಕೆ ಶೇ. 7ರಷ್ಟು ಹೆಚ್ಚಿಸಲಾಗಿರುವ ಮೀಸಲಾತಿಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಡಾ. ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹಾಗೂ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಉಚ್ಚ ನ್ಯಾಯಾಲಯದಲ್ಲಿ ಸದ್ಯ ಬಾಕಿ ಇರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಹೆಚ್ಚಿಸಲಾದ ಈ ಮೀಸಲಾತಿ ಅನುಷ್ಠಾನಕ್ಕೆ ಸದ್ಯ ತಾತ್ಕಾಲಿಕ ಅಡಚಣೆ ಉಂಟಾಗಿದೆ. ನ್ಯಾಯಾಲಯದಲ್ಲಿ ಸರ್ಕಾರವು ಸಮರ್ಥವಾಗಿ ವಾದ ಮಂಡಿಸುವ ಮೂಲಕ ಈ ಮಧ್ಯಂತರ ಆದೇಶವನ್ನು ತಕ್ಷಣವೇ ತೆರವುಗೊಳಿಸಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಈ ಪ್ರಕರಣದಲ್ಲಿ ಪರಿಶಿಷ್ಟ ಸಮುದಾಯಗಳ ಹಿತಾಸಕ್ತಿಯನ್ನು ನ್ಯಾಯಾಲಯದ ಮುಂದೆ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಲು ಸರ್ಕಾರದ ಪರವಾಗಿ ಹಿರಿಯ ಕಾನೂನು ತಜ್ಞರಾದ ಪ್ರೊ. ರವಿವರ್ಮ ಕುಮಾರ್ ಅವರನ್ನು ನೇಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಇದರೊಂದಿಗೆ, ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳ (ವಿಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸಹ ಮುಖ್ಯಮಂತ್ರಿಗಳ ಮುಂದೆ ಇಡಲಾಯಿತು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀಗಳು, ಸಚಿವರು ಹಾಗೂ ಸಮುದಾಯದ ಪ್ರಮುಖರ ಪರವಾಗಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಪ್ರಮುಖ ಭೇಟಿಯ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಟಿ. ರಘುಮೂರ್ತಿ, ಡಾ. ಶ್ರೀನಿವಾಸ, ಜೆ.ಎನ್. ಗಣೇಶ್, ಮಾಜಿ ಸಂಸದರಾದ ದೇವೇಂದ್ರಪ್ಪ, ಬಿ.ಎನ್. ಚಂದ್ರಪ್ಪ ಸೇರಿದಂತೆ ಪರಿಶಿಷ್ಟ ಸಮುದಾಯದ ಹಲವು ಪ್ರಮುಖ ನಾಯಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.