ಬೆಂಗಳೂರು: ಸಿವಿಲ್ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿರುವ ಬೆನ್ನಲ್ಲೇ ಇದೀಗ, ಔಷಧ ಪೂರೈಸಿರುವ 100ಕ್ಕೂ ಅಧಿಕ ಔಷಧ ಕಂಪನಿಗಳಿಗೆ ಹಲವು ತಿಂಗಳಿಂದ ಹಣ ಪಾವತಿಯಾಗಿಲ್ಲ.
ಕಾರ್ಮಿಕ ಇಲಾಖೆಯ ವ್ಯಾಪ್ತಿಯ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಿಗೆ ಕೋಟ್ಯಂತರ ರೂ.ಮೌಲ್ಯದ ವಿವಿಧ ಬಗೆಯ ಜೀವ ರಕ್ಷಕ ಮತ್ತು ಸಾಮಾನ್ಯ ಔಷಧಗಳನ್ನು ಕಂಪನಿಗಳು ಸರಬರಾಜು ಮಾಡಿವೆ. ಅಂದಾಜು 60 ಕೋಟಿ ರೂ. ಮೊತ್ತದ ಔಷಧ ಬಿಲ್‌ಗಳು ಬಾಕಿ ಉಳಿದಿವೆ.ಇಎಸ್‌ಐಸಿ ನಿಯಮದಂತೆ 4ರಿಂದ 6 ವಾರದೊಳಗೆ ಔಷಧ ಪೂರೈಸಿದ್ದ ಕಂಪನಿಗಳಿಗೆ ಹಣ ಪಾವತಿಸುವುದು ಇಲಾಖೆಯ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಆದರೆ, 2025ರ ಜೂನ್‌ನಿಂದ ಈ ಔಷಧ ಬಿಲ್‌ಗಳಿಗೆ ಹಣ ಪಾವತಿಯಾಗಿಲ್ಲ. ಕಮಿಷನ್ ಆಸೆಗಾಗಿ ಅಧಿಕಾರಿಗಳೇ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ಕೆಲ ಬಿಲ್‌ಗಳು ಕಳೆದಿವೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಔಷಧ ಕಂಪನಿಗಳ ಆರೋಪವಾಗಿದೆ.
ದೆಹಲಿಯ ಇಎಸ್‌ಐ ಕೇಂದ್ರ ಕಚೇರಿಯಲ್ಲಿ ಟೆಂಡರ್ ನಡೆಯುತ್ತದೆ. ರೇಟ್ ಕಾರ್ಡ್(ಆರ್‌ಸಿ) ಆಧಾರದಲ್ಲಿ ಅರ್ಹತೆ ಪಡೆದ ಕಂಪನಿಗಳಿಗೆ ಔಷಧ ಪೂರೈಸಲು ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಕಳೆದ ವರ್ಷ ಪೂರೈಕೆ ಆದೇಶ ಪತ್ರ ಪಡೆದಿರುವ ಕಂಪನಿಗಳು, ರಾಜ್ಯದ ಇಎಸ್‌ಐ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ಔಷಧ ಸರಬರಾಜು ಮಾಡಿವೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕಂಪನಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ.
ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹತ್ತಾರು ಕೋಟಿ ರೂ. ಬರುವ ಅನುದಾನದಲ್ಲಿ ಔಷಧಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವುದು ಕಾರ್ಮಿಕ ಇಲಾಖೆಯ ಜವಾಬ್ದಾರಿ. ಅದಂರಂತೆ, ಔಷಧಗಳ ಇಂಡೆಂಟ್ ಸಂಗ್ರಹಿಸಿ ಖರೀದಿಸುವುದು ಅಧಿಕಾರಿಗಳು ಕರ್ತವ್ಯವೂ ಹೌದು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದೆ. ಸಮರ್ಪಕವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ. ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಗಂಭೀರ ಕಾಯಿಲೆಗಳ ನಿವಾರಿಸುವ ಔಷಧಗಳು ದಾಸ್ತಾನು ಇಲ್ಲವಾಗಿದೆ.