ಬೇಲೂರು ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. 
ರಾಜ್ಯ

ಅಧಿಕಾರಿಗಳ ನಿರ್ಲಕ್ಷೃದಿಂದ ನಿವೇಶನ ಹಂಚಿಕೆ ವಿಳಂಬ

ಪ್ರಮುಖ ಮುಖ್ಯಾಂಶಗಳು

  • ರಾಯಪುರ ಸಮೀಪದ ಸರ್ವೇ ನಂ.19ರಲ್ಲಿ ಆಶ್ರಯ ಯೋಜನೆ ನಿವೇಶನಗಳನ್ನು ಹಂಚುವುದು ವಿಳಂಬ
  • ಶಾಸಕ ಎಚ್.ಕೆ.ಸುರೇಶ್ ಬೇಸರ
ಬೇಲೂರು: ಅಧಿಕಾರಿಗಳ ನಿರ್ಲಕ್ಷೃದಿಂದ ರಾಯಪುರ ಸಮೀಪದ ಸರ್ವೇ ನಂ.19ರಲ್ಲಿ ಆಶ್ರಯ ಯೋಜನೆ ನಿವೇಶನಗಳನ್ನು ಹಂಚುವುದು ವಿಳಂಬವಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಬೇಸರ ವ್ಯಕ್ತಪಡಿಸುವುದರ ಜತೆಗೆ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸಂತೆ ಮೈದಾನದಲ್ಲಿರುವ 64 ಜನರನ್ನು ಹೊರತುಪಡಿಸಿ ಒಬ್ಬರನ್ನೂ ಸಹ ತೆಗೆದುಕೊಂಡಿಲ್ಲ. ಎರಡನೇ ಹಂತದಲ್ಲಿ ನಿವೇಶನ ರಹಿತ ಪತ್ರಕರ್ತರು, ಪೌರಕಾರ್ಮಿಕರಿಗೆ ನೀಡಲಾಗುವುದು. ಆ ನಂತರ ಕಡು ಬಡವರನ್ನು ಪರಿಶೀಲಿಸಿ ನಿವೇಶನ ವಿತರಿಸಲಾಗುವುದು. ಒಟ್ಟು 192 ನಿವೇಶನಗಳನ್ನು ಹಂಚುವ ಗುರಿ ಹೊಂದಿದ್ದು, ಈಗ ಎರಡು ಎಕರೆ 14 ಗುಂಟೆ ಜಾಗ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಪೂರ್ಣ ಪ್ರಮಾಣದ ನಿವೇಶನಗಳನ್ನು ಹಂಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಫಲಾನುಭವಿಗಳನ್ನು ಗುರುತಿಸಲು ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ತಲಾ ಒಂದು ಸಮಿತಿ ಇದ್ದು, ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಪಟ್ಟಣದಲ್ಲಿರುವ ಹೊಯ್ಸಳ ಶಾಲೆ ಪಕ್ಕದಲ್ಲಿ 23 ಗುಂಟೆ ಜಾಗ ಮತ್ತು ಪುರಸಭೆಗೆ ಸೇರಿದ 7000 ಅಡಿ ಜಾಗ ಒತ್ತುವರಿಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲು ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಆಶ್ರಯ ಸಮಿತಿ ಸದಸ್ಯ ಬಿ.ಸಿ.ಹರೀಶ್ ಮಾತನಾಡಿ, ಹೊಳೆಬೀದಿಯಲ್ಲಿ ಹೊಯ್ಸಳ ಶಾಲೆಯವರು ಪುರಸಭೆ ಖಾತೆ ಸರ್ವೇ ನಂ.185ರಲ್ಲಿ ಭಸ್ಮೀಕರಣ ಹೊಂಡಕ್ಕೆ ಮೀಸಲಿಟ್ಟಿದ್ದ ಜಾಗ ಹಾಗೂ ಪುರಸಭೆ ಖಾತೆ ನಂ. 1027ರ ಪೈಕಿ 7000 ಅಡಿ ಸೇರಿದಂತೆ ಒಟ್ಟು ಸುಮಾರು 40 ಸಾವಿರ ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗಕ್ಕೆ ಕಾಂಪೌಂಡ್ ನಿರ್ಮಿಸುತ್ತಿದ್ದಾಗ ಆರೋಗ್ಯಾಧಿಕಾರಿ ಲೋಹಿತ್ ತಡೆದಿದ್ದು, ನಂತರ ಅಧಿಕಾರಿಗಳು ಶಾಮೀಲಾಗಿ ಕಾಂಪೌಂಡ್ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷ ಅಕ್ರಂ ಷರ್ೀ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಸಿಗ್ಗಾವಿ, ಆಶ್ರಯ ಸಮಿತಿ ಸದಸ್ಯರಾದ ಇಕ್ಬಾಲ್, ನಾಗರಾಜು, ಡಿಂಪಲ್ ರಾಣಿ ಸೇರಿದಂತೆ ಅಧಿಕಾರಿಗಳಿದ್ದರು.