ಸುರಪುರ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ ನೇತೃತ್ವದ ನಿಯೋಗ ಜಿಲ್ಲಾಽಕಾರಿಗೆ ಮನವಿಪತ್ರ ಸಲ್ಲಿಸಿತು. ಜಿಲ್ಲಾಧ್ಯಕ್ಷÀ ಬಸವರಾಜಪ್ಪಗೌಡ ವಿಭೂತಿಹಳ್ಳಿ, ದೇವಿಂದ್ರಪ್ಪ ಕೊನೇರ, ತಿರುಪತಿ ಹತ್ತಿಕಟಗಿ ಇತರರಿದ್ದರು.
- ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ
ಕೆಂಭಾವಿ: ಸುರಪುರ ತಾಲೂಕು ಬರಪೀಡಿತ ಘೋಷಿಸಬೇಕೆಂದು ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಅಮೀನರಡ್ಡಿ ಯಾಳಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿತು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿ ಚಟುವಟಿಕೆ ತೀವ್ರ ಹಿನ್ನಡೆಯಾಗಿದ್ದು, ಬಿತ್ತಿದ ಬೆಳೆಗಳು ಒಣಗುವ ಹಂತ ತಲುಪಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಪುರ ತಾಲೂಕು ಬರಪೀಡಿತ ಎಂದು ಘೋಷಿಸಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಬೆಳೆ ನಷ್ಟದಿಂದ ಕೃಷಿಯನ್ನೇ ಅವಲಂಬಿತ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯ ಅಭಾವ, ಬೆಳೆ ಹಾನಿ ಹಾಗೂ ಕುಡಿಯುವ ನೀರಿನ ಲಭ್ಯತೆಯನ್ನು ತಕ್ಷಣವೇ ಪರಿಶೀಲಿಸಿ ತಾಲೂಕನ್ನು ಬರಪೀಡಿತ ಘೋಷಿಸಲು ಸರ್ಕಾರಕ್ಕೆ ಶೀಘ್ರ ಶಿಫಾರಸು ಮಾಡುವುದರ ಜತೆಗೆ, ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಬೆಳೆ ನಷ್ಟದ ಪರಿಹಾರ ಒದಗಿಸಬೇಕು. ನೀರಿನ ಅಭಾವ ಇರುವ ಗ್ರಾಮಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕು. ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಿರುವ ಕಡೆಗಳಲ್ಲಿ ತಕ್ಷಣ ಮೇವಿನ ಬ್ಯಾಂಕ್ ಸ್ಥಾಪಿಸಬೇಕು ಹಾಗೂ ಸರ್ಕಾರದ ಬರ ಪರಿಹಾರಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯ ಅರ್ಹ ರೈತರಿಗೆ ತಲುಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಉಪಾಧ್ಯಕ್ಷ ದೇವಿಂದ್ರಪ್ಪ ಕೊನೇರ್, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಗಿ ಇತರರಿದ್ದರು.