ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಿಸಿ ಕೃಷಿ ಕೂಲಿಕಾರರ ಸಂಘದಿಂದ ಹುಮನಾಬಾದ್ನಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಧ್ಯ ಇಸಾಮೋದ್ದಿನ್, ತಾಲೂಕು ಅಧ್ಯ ದೇವಾನಂದ ಗಾಯಕವಾಡ, ಅಮರ ಹುಣಸಗೇರಾ, ಅಂಬುಬಾಯಿ ಮಾಳಗೆ, ಬಸವರಾಜ ಮಾಳಗೆ ಇತರರಿದ್ದರು.
- ಕೃಷಿ ಕೂಲಿಕಾರರ ಸಂಘ ಒತ್ತಾಯ
- ಹುಮನಾಬಾದ್ನಲ್ಲಿ ಪ್ರತಿಭಟನಾ ಮೆರವಣಿಗೆ
ಹುಮನಾಬಾದ್: ಬೀದರ್ ಜಿಲ್ಲೆಯನ್ನು ತಣ ಬರಪೀಡಿತ ಘೋಷಿಸಿ ರೈತರು ಹಾಗೂ ಕೃಷಿ ಕೂಲಿಕಾರರಿಗೆ ಅಗತ್ಯ ಪರಿಹಾರ ಮತ್ತು ವಿಬಿಜಿ ರಾಮ್ಜಿ ಯೋಜನೆಯಡಿ ಕೆಲಸ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಸಮಿತಿ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದ ಮೂಲಕ ತಹಸಿಲ್ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಳಿಕ ಮಾತನಾಡಿದ ಪ್ರಮುಖರು, ಮಳೆ ಕೊರತೆಯಿಂದ ಜಿಲ್ಲೆಯ ಬಹುತೇಕ ಕಡೆ ಬೆಳೆಗಳು ಹಾನಿಗೊಳಗಾಗಿ ರೈತರು ಮತ್ತು ಕೃಷಿ ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಸಮಸ್ಯೆ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತರ ಸಾಲ ವಸೂಲಾತಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಬಡ ಕುಟುಂಬಗಳಿಗೆ ಆಹಾರಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ವಿತರಿಸಬೇಕು. ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಗಳನ್ನು ಪುನ- ಮಂಜೂರು ಮಾಡಬೇಕು. ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ವಿಬಿಜಿ ರಾಮ್ಜಿ ಅಡಿ 200 ದಿನ ಉದ್ಯೋಗ ಜತೆ ದಿನಕ್ಕೆ 600 ರೂ. ಕೂಲಿ ನಿಗದಿಪಡಿಸಬೇಕು, ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೇಂದ್ರ ಆರಂಭಿಸಬೇಕು. ಕೂಲಿಗಾಗಿ ಕಾಳು ಯೋಜನೆ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜೀವನಾವಶ್ಯಕ ವಸ್ತುಗಳನ್ನು ಅದರ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಿಎಂಗೆ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯ ಇಸಾಮೋದ್ದಿನ್, ತಾಲೂಕು ಅಧ್ಯಕ್ಷ ದೇವಾನಂದ ಗಾಯಕವಾಡ, ಪ್ರಮುಖರಾದ ಅಮರ ಹುಣಸಗೇರಾ, ಅಂಬುಬಾಯಿ ಮಾಳಗೆ, ಬಸವರಾಜ ಮಾಳಗೆ, ಸೋಮನಾಥ ಹುಣಸಗೇರಾ, ಭೀಮಶಾ ಜಲಸಂಗಿ, ಆಕಾಶ ಹುಣಸಗೇರಾ, ಪ್ರಕಾಶ ಮುಗನೂರ, ಕಂಟೆಪ್ಪ ಪೂಜಾರಿ, ಸೂರ್ಯಕಾಂತ ಇತರರು ಪಾಲ್ಗೊಂಡಿದ್ದರು.