ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯಿಸಿ ಶನಿವಾರ ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಉಪತಹಸೀಲ್ದಾರ್ ಅರುಣಕುಮಾರ ಅವರಿಗೆ ಸಲ್ಲಿಸಲಾಯಿತು. ಆಕಾಶ ಖಂಡಾಳೆ, ಡಾ.ಬಸವರಾಜ ಸ್ವಾಮಿ, ವಿ ಟಿ ಶಿಂಧೆ, ಪ್ರವಿಣ ಕಾಡಾಡಿ, ಅರ್ಜುನ ಸರಜವಳಗೆ, ಭಗವತ್ ಜನಬಾ, ಸಂತೋಷ ಗಾಯಕವಾಡ, ನಿತೀಶ ಪಾಟೀಲ್, ಬಸವರಾಜ ಹಾರಕುಡೆ ಇತರರಿದ್ದರು.
- ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ ನೇತೃತ್ವದಲ್ಲಿ ಮೆರವಣಿಗೆ
- ಮನವಿಪತ್ರ ಸಲ್ಲಿಕೆ
ಬಸವಕಲ್ಯಾಣ: ತೀವ್ರ ಮಳೆ ಆಭಾವದಿಂದ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕುಗಳಲ್ಲಿ ರೈತರು ಅಪಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಈ ಎರಡು ತಾಲೂಕು ಬರಪೀಡಿತ ಪ್ರದೇಶ ಎಂದು ತಕ್ಷಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಶನಿವಾರ ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಬಸವ ಮಹಾಮನೆ ಪರಿಸರದಲ್ಲಿ 108 ಅಡಿ ಬಸವ ಪುತ್ಥಳಿ ಸಮೀಪದಿಂದ ಮುಖ್ಯ ತಾಲೂಕು ಆಡಳಿತ ಸೌಧದವರೆಗೆ ಹಲಿಗೆಯೊಂದಿಗೆ ನಡೆದ ಮೆರವಣಿಗೆಯಲ್ಲಿ ಬೇಕೆ ಬೇಕು. ನ್ಯಾಯ ಬೇಕು, ರೈತರಿಗೆ ನ್ಯಾಯ ಒದಗಿಸಬೇಕು. ಬರ ಘೋಷಣೆ ಮಾಡಬೇಕು ಎಂದು ಘೋಷಣೆ ಕೂಗಿ ಬೇಡಿಕೆ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಅರುಣಕುಮಾರ ಅವರಿಗೆ ಸಲ್ಲಿಸಲಾಯಿತು.
ಮಳೆ ಕೊರತೆಯಿಂದಾಗಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬಿತ್ತನೆಯಾದ ಬೆಳೆಗಳು ಒಣಗಿ ಹೋಗಿದ್ದು, ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಚಟುವಟಿಕೆ ಸಂಪೂರ್ಣ ಹಿನ್ನಡೆಯಾಗಿದ್ದು, ರೈತರ ಜೀವನೋಪಾಯ ಸಂಕಷ್ಟಕರವಾಗಿದೆ. ಬಸವಕಲ್ಯಾಣ ಮತ್ತು ಹುಲಸೂರು ತಾಲೂಕು ತಕ್ಷಣ ಬರಪೀಡಿತ ಪ್ರದೇಶ ಎಂದು ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹೆಕ್ಟೇರಿಗೆ 50 ಸಾವಿರ ರೂ. ಪರಿಹಾರ ಧನ ಘೋಷಿಸಿ ತಕ್ಷಣವೇ ಪರಿಹಾರ ನೀಡಬೇಕು. ರೈತರ ವಿಮೆ ಹಣ ಪಾವತಿಸಬೇಕು. ರೈತರ ಜೀವನೋಪಾಯಕ್ಕೆ ಬೇಕಾಗಿರುವ ಮೂಲಸೌಕರ್ಯ ಕಲ್ಪಿಸಿಕೊಡಬೇಕು.ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಗುಳೆ ಹೋಗುವುದನ್ನು ತಪ್ಪಿಸಬೇಕು, ರೈತರ ಆತ್ಮಹತ್ಯೆ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ ಮಾತನಾಡಿ, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಮುಂದಾಗಬೆಕು. ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಬರಿಹಾರ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
ಹುಲಸೂರು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ಮಳೆ ಇಲ್ಲದೇ ರೈತರು ತೊಂದರೆಗೆ ಸಿಕುಲಿದ್ದಾರೆ. ಮಳೆ ನಿರೀಕ್ಷೆಯಲ್ಲಿ ಸಾಲ ಮಾಡಿ ಬಿತ್ತಿದ ಬೀಜ ಮಣ್ಣು ಪಾಲಾಗುತ್ತಿದೆ. ಇನ್ನು ಬಿತ್ತದೆ ಇರುವ ರೈತರು ಮುಂದೆ ಹೇಗೆ ಎನ್ನುವ ಚಿಂತೆಯಲಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಡಾ.ಬಸವರಾಜ ಸ್ವಾಮಿ, ವಿ ಟಿ ಶಿಂಧೆ, ಪ್ರವಿಣ ಕಾಡಾಡಿ, ಅರ್ಜುನ ಸರಜವಳಗೆ, ಭಗವತ್ ಜನಬಾ, ಸಂತೋಷ ಗಾಯಕವಾಡ, ನಿತೀಶ ಪಾಟೀಲ್, ಬಸವರಾಜ ಹಾರಕುಡೆ, ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಭಾಗವಹಿಸಿದ್ದರು.