ರಾಜ್ಯ

ಏಪ್ರಿಲ್ 24 ರಂದು ಡಾ.ರಾಜಕುಮಾರ ಜನ್ಮ ದಿನಾಚರಣೆಗೆ ನಿರ್ಧಾರ

ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಇದೇ ಏಪ್ರಿಲ್ 24 ರಂದು ಜಿಲ್ಲಾ ಮಟ್ಟದಲ್ಲಿ ವರನಟ ಡಾ.ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆಗೆ ಮಂಗಳವಾರ ಜರುಗಿದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧ್ಯಕ್ಷತೆಯ‌ ಸಭೆಯು ನಿರ್ಧಾರ ಕೈಗೊಂಡಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ಡಾ.ರಾಜಕುಮಾರ ಅವರ ಜನ್ಮ‌ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಿದ್ದು, ಕಾರ್ಯಕ್ರಮದಲ್ಲಿ ಡಾ. ರಾಜ್ ಭಾವಚಿತ್ರಕ್ಕೆ ಪೂಜೆ ಮತ್ತು ಡಾ.ರಾಜಕುಮಾರ ಅಭಿನಯದ ಚಲನಚಿತ್ರಗಳ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲು ಸಭೆ ಒಮ್ಮತದ ನಿರ್ಣಯ ತೆಗೆದುಕೊಂಡಿದೆ.
ಶಿಷ್ಟಚಾರದಂತೆ ಜಿಲ್ಲಾ ಉಸ್ತುವಾರಿ‌ ಸಚಿವರು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು, ಗಾನಯಾನಕ್ಕೆ‌ ಕಲಾ‌ ತಂಡ ಅಂತಿಮಗೊಳಿಸಬೇಕೆಂದು,‌ ಮುಂಚಿವಾಗಿಯೆ ಗಣ್ಯರಿಗೆ ಆಮಂತ್ರಣ ಪತ್ರಿಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಎ.ಡಿ.ಸಿ ಸೂಚಿಸಿದರು.
ಕಾರ್ಯಕ್ರಮಕ್ಕೆ ಗಣ್ಯರು ಸೇರಿದಂತೆ ಸಾರ್ವಜನಿಕರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಹಾಗೂ ಡಾ.ರಾಜ್ ಅಭಿಮಾನಿಗಳು ಬರುವುದರಿಂದ ಆಸನ ವ್ಯವಸ್ಥೆ, ಕುಡಯುವ ನೀರಿನ ವ್ಯವಸ್ಥೆ ಮಾಡಬೇಕು. ಕನ್ನಡ ಭವನ ಆವರಣ ಸ್ವಚ್ಚಗೊಳಿಸಬೇಕು.ಕಾರ್ಯಕ್ರಮ‌ದ‌ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಿಬೇಕೆಂದು ಹಾಗೂ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ‌ ವಿ. ಕುಲಕರ್ಣಿ, ಸಾಹಿತಿ ಭೀಮಪ್ಪ ಬೋನಾಳ,‌ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಸದಾನಂದ‌ ಪೆರ್ಲ‌ ಸೇರಿದಂತೆ ಅನೇಕರು ಮಾತನಾಡಿ, ಡಾ.ರಾಜ್ ಅವರ ಚಿತ್ರಗಳು ಕೇವಲ ಸಿನಿಮಾಗಳಾಗದೆ ಅವು ಬದುಕಿನ ದಾರಿದೀಪಗಳಾಗಿವೆ. ಇಂತಹ ಮೇರು ನಟನ ಪುತ್ಥಳಿ ನಗರದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಸ್ಥಾಪಿಸಲು ಈ ಹಿಂದೆ ಪಾಲಿಕೆಯಿಂದ‌ ನಿರ್ಣಯ ಕೈಗೊಂಡಿದ್ದು, ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಪುತ್ಥಳಿ ಸ್ಥಾಪಿಸುವ ಮೂಲಕ ಶ್ರೇಷ್ಠ ಕಲಾವಿದನಿಗೆ ಗೌರವ ಸಲ್ಲಿಸಬೇಕು, ನಗರದಲ್ಲಿ ಒಂದು ರಸ್ತೆಗೆ ಅವರ ಹೆಸರಿಡಬೇಕು, ಡಾ.ರಾಜಕುಮಾರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿಕೊಂಡರು.
ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಡಾ.ರಾಜಕುಮಾರ್ ಅವರ ಜನ್ಮ‌ ದಿನಾಚರಣೆಗೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಸಭೆಗೆ ವಿವರಿಸಿದರು‌. ಸಭೆಯಲ್ಲಿ ಸಿ.ಸಿ.ಆರ್.ಬಿ ವಿಭಾಗದ ಎ.ಸಿ.ಪಿ ಸುಧಾ ಆದಿ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕೆ ಇಲಾಖೆ, ಜೆಸ್ಕಾಂ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಮುಖಂಡರು, ಡಾ.ರಾಜ್ ಅಭಿಮಾನಿಗಳು ಭಾಗವಹಿಸಿದ್ದರು.