ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಾ. ಫ. ಗು. ಹಳಕಟ್ಟಿ ಜಯಂತಿಯನ್ನು ಜುಲೈ 2 ರಂದು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ ಅವರ ಸಭೆಯಲ್ಲಿ ನಿರ್ಧರಿಸಲಾಯಿತು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇದೇ ಜುಲೈ 2 ರಂದು ಗುರುವಾರ ಮಧ್ಯಾಹ್ನ 11.30 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಹಳಕಟ್ಟಿಯವರ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಕಡ್ಡಾಯವಾಗಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು. ಸಭೆಯಲ್ಲಿ ನುರಿತ ಉಪನ್ಯಾಸಕರನ್ನು ಸಹ ಆಹ್ವಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರ ಜೊತೆಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಯಂತಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೂಚಿಸಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಸಿಬ್ಬಂದಿ ಸಿದ್ದರಾಮ ಸಿಂದೆ ಅವರು ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ಪತ್ರಿಕಾ ಆಮಂತ್ರಣ ಮುದ್ರಿಸಲಾಗುವುದು. ನಾಡಗೀತೆ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ವೇದಿಕೆ ಮೇಲೆ ಸಮಾಜದ ಮುಖಂಡರಾದ ಚೆನ್ನಾಮಲ್ಲಪ್ಪ, ಚಂದ್ರಶೇಖರ, ಸೋಮಶೇಖರ್. ಬಿ. ಧತ್ತರ್ಗಿ, ಶ್ರವಣ ಕುಮಾರ.ಸಿದ್ದರೂಢ ಮುನ್ನಳ್ಳಿ, ಚಂದ್ರಕಾಂತ ಮುನ್ನಳ್ಳಿ, ರಾಬಹದ್ದೂರ್ ರೂಗಿ ಇತರರು ಉಪಸ್ಥಿತರಿದ್ದರು.