ಶಹಾಪುರ ತಾಲೂಕಿನ ಮಡ್ನಾಳ್ ಸಮೀಪ ಭಾನುವಾರ ಬೆಳಗ್ಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೊಲೆರೋ ವಾಹನ.
- ವಿದ್ಯುತ್ ಕಂಬಕ್ಕೆ ಬೊಲೆರೋ ವಾಹನ ಡಿಕ್ಕಿ
- ಮಡ್ನಾಳ್ ಬಳಿ ಭೀಕರ ಅಪಘಾತ
- ೨೧ ಜನರಿಗೆ ಗಾಯ
ತಾಲೂಕಿನ ಮಡ್ನಾಳ್ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮೂವರು ಮಹಿಳಾ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚಾಲಕ ಶೇಖಪ್ಪ ಮಡ್ನಾಳ್ ಸೇರಿ ಇತರೇ ೨೧ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಭಾಗ್ಯಶ್ರೀ (೩೫), ಸತ್ಯಮ್ಮ (೩೦) ಹಾಗೂ ಹೊನ್ನಿಂಗಮ್ಮ (೧೮) ಮೃತಪಟ್ಟ ಮಡ್ನಾಳ್ ಗ್ರಾಮದ ದುರ್ದೈವಿಗಳು. ಇವರೆಲ್ಲರನ್ನೂ ಬೊಲೆರೋ ವಾಹನದಲ್ಲಿ ಕೂಡಿಸಿಕೊಂಡು ಬರುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿದಾಗ ರಸ್ತೆ ಬದಿಗಿದ್ದ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಮೂವರು ಸಾವಿಗೀಡಾದವರು ಸೇರಿ ೧೪ ಜನ ಮಡ್ನಾಳ್ ಮತ್ತು ಇನ್ನುಳಿದ ೧೦ ಜನ ಹಳಿಸಗರ ಗ್ರಾಮದವರೆಂದು ಹೇಳಲಾಗಿದೆ.
ಮಡ್ನಾಳ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಹತ್ತಿ ಬೆಳೆಯ ಕಳೆ (ಕಸ) ತೆಗೆಯುವ ಕೃಷಿ ಕೆಲಸಕ್ಕಾಗಿ ಬೆಳಗಿನ ಜಾವವೇ ಮಹಿಳಾ ಕೂಲಿ ಕಾರ್ಮಿಕರು ತೆರಳಿದ್ದರು. ಬೆಳಗ್ಗೆ ೯ರ ತನಕ ಕೆಲಸ ಮುಗಿಸಿ ಬೊಲೆರೋ ಪಿಕಪ್ ವಾಹನದಲ್ಲಿ ತಮ್ಮ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಮಡ್ನಾಳ್ ಬಳಿ ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿದ್ದ ಭಾಗ್ಯಶ್ರೀ, ಸತ್ಯಮ್ಮ ಹಾಗೂ ಹೊನ್ನಿಂಗಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾರೆ.
ವಾಹನದಲ್ಲಿದ್ದ ಒಟ್ಟು ೨೪ ಜನರಲ್ಲಿ ೨೧ಜನರು ಗಾಯಗೊಂಡಿದ್ದು, ಅವರಲ್ಲಿ ೧೪ ಜನರನ್ನು ಕಲಬುರಗಿ ಮತ್ತು ೭ ಶಹಾಪುರ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವ ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ ಈ ವಾಹನದ ಚಾಲಕನ ಹೆಂಡತಿಯೂ ಕೂಲಿ ಕೆಲಸಕ್ಕೆ ಬಂದು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಲೇ ಎಸ್‌ಪಿ ಪೃಥ್ವಿಕ್ ಶಂಕರ್, ಭೀಮರಾಯನ ಗುಡಿ ಪಿಎಸ್‌ಐ ದೇವೇಂದ್ರರೆಡ್ಡಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬAಧ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.