ಕೆಪಿಎಸ್​ಸಿ ಹಗರಣ  
ರಾಜ್ಯ

80 ಲಕ್ಷಕ್ಕೆ ಡೀಲ್​, 40 ಲಕ್ಷಕ್ಕೆ ಫೈನಲ್​

ಪುರೀಕ್ಷೆಗೂ ಒಂದು ದಿನ ಮುಂಚಿತವಾಗಿ ಪ್ರಶ್ನೆಪತ್ರಿಕೆ ಹಂಚಿಕೆ , ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ತರಬೇತಿ ದೃಢ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೆಪಿಎಸ್‌ಸಿ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಕನ್ನಾಳೆ ಪರೀಕ್ಷೆಗೂ ಒಂದು ದಿನ ಮುಂಚಿತವಾಗಿ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಉತ್ತರಗಳ ತರಬೇತಿ ಹಾಗೂ 30 ರಿಂದ 40 ಲಕ್ಷ ರೂ. ಪಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಹಣ ಸಂಗ್ರಹಿಸಿ ಅದನ್ನು ವಿವಿಧ ರೀತಿಯಲ್ಲಿ ವರ್ಗಾವಣೆ ಮಾಡುವ ಮೂಲಕ ಹಣ ಪಡೆದಿರುವ ಮೂಲವನ್ನು ಮರೆಮಾಚಲು ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ ತಿಳಿಸಿದೆ.

80 ಲಕ್ಷಕ್ಕೆ ಡೀಲ್:

ಮಧ್ಯವರ್ತಿ ಕನ್ನಾಳೆ ಮತ್ತು ಆತನ ಸಹಚರರು ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಅಕ್ರಮವಾಗಿ ಆಯ್ಕೆ ಮಾಡಿಸುವ ಭರವಸೆ ನೀಡುತ್ತಿದ್ದರು. ಪ್ರತಿ ಒಬ್ಬ ಅಭ್ಯರ್ಥಿಯಿಂದ ಆರಂಭದಲ್ಲಿ ಸುಮಾರು 80 ಲಕ್ಷ ಬೇಡಿಕೆ ಇಡುತ್ತಿದ್ದರು. ಬಳಿಕ 30ರಿಂದ 40 ಲಕ್ಷಕ್ಕೆ ಡೀಲ್ ಮಾಡುತ್ತಿದ್ದರು.

ಒಪ್ಪಂದದ ಮೊತ್ತದ ಒಂದು ಭಾಗವನ್ನು ನಗದು ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಮುಂಗಡವಾಗಿ ಪಡೆಯಲಾಗಿತ್ತು. ಉಳಿದ ಹಣದ ಭದ್ರತೆಗಾಗಿ ಕೆಲವು ಅಭ್ಯರ್ಥಿಗಳಿಂದ ಖಾಲಿ ಸಹಿ ಮಾಡಿದ ಚೆಕ್‌ಗಳು ಹಾಗೂ ಪ್ರಾಮಿಸರಿ ನೋಟ್‌ಗಳನ್ನು ಪಡೆಯುತ್ತಿದ್ದರು. ಶೋಧ ಕಾರ್ಯಾಚರಣೆ ವೇಳೆ ಇವುಗಳಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಬೀದರ್‌ನ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ. ಬ್ಯಾಂಕ್ ಖಾತೆಯ ಮೂಲಕ ಅಭ್ಯರ್ಥಿಗಳಿಂದ ಹಣ ಸ್ವೀಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಶ್ನೆ ಪತ್ರಿಕೆ ಹಂಚಿಕೆ:

ಅಭ್ಯರ್ಥಿಗಳಿಗೆ ಸರಿಯಾದ ಉತ್ತರ ಒಳಗೊಂಡ ಸೋರಿಕೆಯಾದ ಪ್ರಶ್ನೆಪತ್ರಿಕೆ ಒಂದು ದಿನ ನೀಡಲಾಗುತ್ತಿತ್ತು. ಬೆಂಗಳೂರಿನ ಹೊರವಲಯದ ರೆಸಾರ್ಟ್‌ಗೆ ಆಯ್ದ ಅಭ್ಯರ್ಥಿಗಳನ್ನು ಕರೆದೊಯ್ದು, ಬಸವರಾಜ್ ಕನ್ನಾಳೆ ಹಾಗೂ ಆತನ ಸಹಚರರ ಮೇಲ್ವಿಚಾರಣೆಯಲ್ಲಿ ಉತ್ತರಗಳನ್ನು ಕಂಠಪಾಠ ಮಾಡಿಸಲಾಗಿತ್ತು. ಮರುದಿನ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಬಸವರಾಜ್ ಕನ್ನಾಳೆ ಅಥವಾ ಆತನ ಸಹಚರರು ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ಕರೆದೊಯುತ್ತಿದ್ದರು.

ಪರೀಕ್ಷಾ ನಿಯಂತ್ರಕನಿಂದ ಪ್ರಶ್ನೆಪತ್ರಿಕೆ ಸೋರಿಕೆ?

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಆರೋಪಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಪಾತ್ರ ತನಿಖೆಯಲ್ಲಿ ಪತ್ತೆಯಾಗಿದೆ. ಪರೀಕ್ಷೆಗಳ ಪಾರದರ್ಶಕ ಹಾಗೂ ನ್ಯಾಯಸಮ್ಮತ ನಿರ್ವಹಣೆ, ಪ್ರಶ್ನೆಪತ್ರಿಕೆಗಳ ಮುದ್ರಣದ ಅಂತಿಮ ಮೇಲ್ವಿಚಾರಣೆ ಮತ್ತು ಗೌಪ್ಯ ಪರೀಕ್ಷಾ ಸಾಮಗ್ರಿಗಳ ಸುರಕ್ಷಿತ ಕಸ್ಟಡಿಗೆ ಅವರು ಜವಾಬ್ದಾರರಾಗಿದ್ದರು. ಬಸವರಾಜ್ ಕನ್ನಾಳೆ ಜತೆಗಿನ ನಿಕಟ ಸಂಪರ್ಕದ ಹಿನ್ನೆಲೆಯಲ್ಲಿ ಗಂಗ್ವಾರ್ ಪರೀಕ್ಷೆಗೆ ಒಂದು ದಿನ ಮುನ್ನ ಸರಿಯಾದ ಉತ್ತರಗಳನ್ನು ಒಳಗೊಂಡ ಪ್ರಶ್ನೆಪತ್ರಿಕೆಯನ್ನು ಅವರಿಗೆ ಒದಗಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದಿದೆ.

ಚಿನ್ನ, ವಿಮಾನ ಪ್ರಯಾಣಕ್ಕೂ ಹಣ!

ಅಭ್ಯರ್ಥಿಗಳಿಂದ ಬಂದ ಅಕ್ರಮದ ಹಣದಿಂದ ಕನ್ನಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರಗೆ ಚಿನ್ನಾಭರಣ ಖರೀದಿಸಲು ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ ಹಣ ವರ್ಗಾವಣೆ, ವಿಮಾನ ಪ್ರಯಾಣಕ್ಕೆ ನಗದು ಪಾವತಿ ಹಾಗೂ ಇತರ ನಗದು ವಹಿವಾಟುಗಳ ಮೂಲಕ ಅಕ್ರಮ ಎಸಗಿದ್ದಾರೆ. ಹಣದ ನಿಜವಾದ ಸ್ವರೂಪ ಹಾಗೂ ಮೂಲವನ್ನು ಮರೆಮಾಚಿ, ಅದನ್ನು ಕಾನೂನುಬದ್ಧವಾಗಿ ಗಳಿಸಿದ ಆಸ್ತಿಯಂತೆ ಬಿಂಬಿಸುವ ಉದ್ದೇಶದಿಂದ ಈ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.