ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿರುವ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಚಾಮನಾಳ ಗ್ರಾಮದ ಭಕ್ತರನ್ನು ಗುರುಸುಣಿಗಿ ಗ್ರಾಮದ ಕೆಲ ಯುವಕರು ಸೋಮವಾರ ಏಕಾಏಕಿ ದಾಳಿ ನಡೆಸುತ್ತಿರುವುದು.
- ಸಿದ್ಧಲಿಂಗೇಶ್ವರ ದೇಗುಲಕ್ಕೆ ಬಂದ ಚಾಮನಾಳ ಭಕ್ತರೇ ಟಾರ್ಗೆಟ್
- ೧೪ ಜನರ ವಿರುದ್ಧ ಪ್ರಕರಣ ದಾಖಲು
ವಡಗೇರಾ: ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತಿಯಿಂದ ತೆರಳಿದ್ದ ಚಾಮನಾಳ ಗ್ರಾಮದ ದಲಿತರ ಮೇಲೆ ಗುಂಪೊಂದು ದೊಣ್ಣೆ ಹಾಗೂ ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ನಡೆದಿದ್ದು, ೧೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಚಾಮನಾಳ ಗ್ರಾಮದ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ ಗ್ರಾಮದ ಕೆಲ ಯುವಕರು ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಕಟ್ಟಿಗೆ ಹಾಗೂ ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಹೊಡೆಯಬೇಡಿ ಎಂದು ಪರಿಪರಿಯಾಗಿ ಬೇಡಿದರೂ ಹಲ್ಲೆ ನಿಲ್ಲಿಸಲಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಸಂಬಂಧ ಜಾತಿ ನಿಂದನೆ, ಕೊಲೆಯತ್ನ ಸೇರಿ ವಿವಿಧ ಆರೋಪದಡಿ ೧೪ ಜನರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆ ನಡೆದು ಹಲವು ಗಂಟೆ ಕಳೆದರೂ ಹಲ್ಲೆಕೋರರನ್ನು ಬಂಽಸದಿರುವುದಕ್ಕೆ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕೂಡಲೇ ಅವರನ್ನು ಬಂಧಿಸಿ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುರುಸುಣಗಿ ಸಿದ್ಧಲಿಂಗೇಶ್ವರ ಜಾತ್ರೆಗೆ ಬಂದಿದ್ದ ಚಾಮನಾಳನ ಮಾದಿಗ ಸಮುದಾಯದವರು ಪ್ರಯಾಣಿಸಿದ್ದ ಆಟೋ ಹಿಂಬದಿಯಿಂದ ಪಾರ್ಕಿಂಗ್ ವೇಳೆ ಗುರುಸಣಗಿ ಹುಡುಗನಿಗೆ ತಗುಲಿದೆ. ಈ ವೇಳೆ ಪಾಲಕರ ಹಾಗೂ ಮಾದಿಗ ಸಮುದಾಯದವರೊಂದಿಗೆ ಮಾತಿನ ಚಕಮಕಿ ನಡೆದು ಅದು ತಾರಕಕ್ಕೇರಿದ್ದರಿಂದ ಹಲ್ಲೆ ಮಾಡುವ ಮಟ್ಟಿಗೆ ತಿರುಗಿದೆ. ಆಟೋ ತಗುಲಿದ ಮಗುವಿನ ಕಡೆವರು ೧೪ ಜನ ಸೇರಿ ಚಾಮನಾಳ ಗ್ರಾಮದ ಮಾದಿಗ ಸಮುದಾಯ (ದಲಿತರ) ಮೇಲೆ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಽಸಿದ್ದು, ಮಿಕ್ಕ ೧೨ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಧ್ಯ ವಾತವರಣ ತಿಳಿಯಾಗಿದೆ.| ಪೃಥ್ವಿಕ್ ಶಂಕರ್ಎಸ್ಪಿ ಯಾದಗಿರಿ