ಕಲಬುರಗಿ ಜಲ ಭವನದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕೆಯುಐಡಿಎಫ್​ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಅಲ್ಲಮಪ್ರಭು ಪಾಟೀಲ್​, ಜಗದೇವ ಗುತ್ತೇದಾರ್​, ವರ್ಷಾ ಜಾನೆ, ಅವಿನಾಶ ಶಿಂಧೆ, ಆರ್​.ಪಿ.ಜಾಧವ್​ ಇತರರಿದ್ದರು. 
ರಾಜ್ಯ

ಜೂನ್​ 2027ರೊಳಗೆ ಪೂರ್ಣಗೊಳಿಸಲು ಗಡುವು

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಎಲ್​ ಆ್ಯಂಡ್​ ಟಿ ಕಂಪನಿಗೆ ಸಚಿವ ಡಾ.ಯತೀಂದ್ರ ಎಚ್ಚರಿಕೆ
  • ಕಲಬುರಗಿ ನಿರಂತರ ನೀರು ಪೂರೈಕೆ ಯೋಜನೆ
ಕಲಬುರಗಿ: ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 247 ಯೋಜನೆ ಕಾಮಗಾರಿ ಚುರುಕುಗೊಳಿಸಿ ಜೂನ್​ 2027ರೊಳಗೆ ಮುಗಿಸುವಂತೆ ಎಲ್​ ಆ್ಯಂಡ್​ ಟಿ ಕಂಪನಿಗೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಗಡುವು ನೀಡಿದರು.
ನಗರದ ಜಲಭವನದಲ್ಲಿ ಸೋಮವಾರ ಕರೆದಿದ್ದ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕೆಯುಐಡಿಎಫ್​ಸಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉದ್ದೇಶಿತ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾಲ್ಕು ಬಾರಿ ಯೋಜನೆ ಪೂರ್ಣಕ್ಕೆ ಕಾಲಮಿತಿ ವಿಸ್ತರಿಸಿದರೂ ಮುಗಿದಿಲ್ಲ ಎಂದರೆ ಜನರಿಗೆ ನೀಡಿದ ವಾಗ್ದಾನ ಪೂರೈಸುವುದು ಹೇಗೆ ಎಂದು ಪ್ರಶ್ನಿಸಿದರು.
ಯಾವ ಕಾರಣಕ್ಕೂ ಮತ್ತೊಮ್ಮೆ ಅವಧಿ ವಿಸ್ತರಣೆ ಮಾಡಲ್ಲ. ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಕಂಪನಿ ಮತ್ತು ಮೇಲುಸ್ತುವಾರಿ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೇಯರ್​ ವರ್ಷಾ ರಾಜೀವ ಜಾನೆ ಮಾತನಾಡಿ, ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿಗೆ ವೇಗ ನೀಡಬೇಕಾದ ಎಲ್​ ಆ್ಯಂಡ್​ ಟಿ ಕಂಪನಿ ಇತ್ತೀಚೆಗೆ ಏಕಾಏಕಿ 50 ಸಿಬ್ಬಂದಿ ತೆಗೆದು ಹಾಕಿದೆ ಎಂದು ಸಚಿವರ ಗಮನ ಸೆಳೆದರು. ಕಾರ್ಮಿಕರ ಕೊರತೆಯಿಂದಲೇ ಕೆಲಸ ವಿಳಂಬವಾಗಿರುವಾಗ ಇರುವವರನ್ನು ತೆಗೆದರೆ ಹೇಗೆ? ಅವರೆಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಸಚಿವ ಯತೀಂದ್ರ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ಈ ಯೋಜನೆಯಡಿ ಎ ಮತ್ತು ಬಿ ಸ್ಕೀಮ್​ ಎಂದು ವಿಂಗಡಿಸಿದ್ದು, ಈ ಅಂಕಿಸಂಖ್ಯೆ ಕೇವಲ ಎ ಸ್ಕೀಮಿಗೆ ಸಂಬಂಧಿಸಿದೆ. ಬಿ ಸ್ಕೀಮ್​ನಲ್ಲಿ ರಿಂಗ್​ ರಸ್ತೆ ಹೊರಗಡೆ ಪ್ರದೇಶದಲ್ಲಿ ಸುಮಾರು 35,000 ಮನೆಗಳಿವೆ. ಈ ಎಲ್ಲ ಮನೆಗಳಿಗೆ ನಿರಂತರ ನೀರು ಪೂರೈಕೆ ಭೀಮಾ, ಬೆಣ್ಣೆತೊರಾ ಜಲಮೂಲದಿಂದ ಸಾಧ್ಯವಿಲ್ಲ. ನಗರಕ್ಕೆ ಭೀಮಾ ನದಿ ಮೂಲಕ ಪೂರೈಸುವ ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಹರಿಸುವ 1,850 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದರೆ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನಗರದ ಎಲ್ಲಾ ವಾರ್ಡ್​ಗಳಿಗೆ ನಿರಂತರ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದರು.
ಒಳಚರಂಡಿ ನಿರ್ಮಾಣ ಅಗತ್ಯ
ನಗರದಲ್ಲಿ 40 ವರ್ಷದ ಹಳೆ ಚರಂಡಿ ವ್ಯವಸ್ಥೆ ಇರುವುದರಿಂದ ಎಲ್ಲೆಂದರಲ್ಲಿ ಸೋರಿಕೆ ಕಂಡು, ದಿನದಿಂದ ದಿನಕ್ಕೆ ನೈರ್ಮಲ್ಯ ಹದಗೆಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಗರದಲ್ಲಿ 700 ಕಿ.ಮೀ ಉದ್ದದ ಹೊಸದಾಗಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವರು ಯಾವೆಲ್ಲ ಮೂಲಗಳಿಂದ ಅರ್ಥಿಕ ಸಂಪನ್ಮೂಲ ಕ್ರೂಢಿಕರಿಸಿ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ತರಲು ವಿವರವಾದ ಪ್ರಸ್ತಾವನೆ ತಯಾರಿಸುವಂತೆ ಪಾಲಿಕೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ಎಲ್​ ಟಿ ಕಂಪನಿ ನಿಧಾನಗತಿ ಕಾರ್ಯ ಹಿನ್ನೆಲೆಯಲ್ಲಿ ಈವರೆಗೆ ಕಂಪನಿಗೆ 54 ಕೋಟಿ ರೂ. ದಂಡ ವಿಧಿಸಿದೆ. ಪ್ರಸ್ತುತ ಬರ ಪರಿಸ್ಥಿತಿ ಕಾರಣ 35 ಟ್ಯಾಂಕರ್​ ಮೂಲಕ ಪ್ರತಿ ದಿನ 150 ಟ್ರಿಪ್​ ಮೂಲಕ ಬೇಡಿಕೆ ಇದ್ದ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ ಎಂದಾಗ, ಸಭೆಯಲ್ಲಿದ್ದ ಶಾಸಕರು ಮತ್ತು ಪಾಲಿಕೆ ಮೇಯರ್​ ಈ ಸಂಖ್ಯೆ ಸಾಲುತ್ತಿಲ್ಲ, ಟ್ರಿಪ್​ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದಾಗ ಸಚಿವ ಯತೀಂದ್ರ ಸ್ಪಂದಿಸಿ, ಕೂಡಲೆ 5&10 ಹೆಚ್ಚುವರಿ ಟ್ಯಾಂಕರ್​ ಪಡೆದು ಟ್ರಿಪ್​ ಹೆಚ್ಚಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ 2ರಲ್ಲಿ 127.50 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳುತ್ತಿರುವ 54 ಕಾಮಗಾರಿ ಮತ್ತು ಅಮೃತ್​ 2.0 ನಲ್ಲಿ 9.40 ಕೋಟಿ ರೂ. ವೆಚ್ಚದಲ್ಲಿ ಐದು ಉದ್ಯಾನವನ ಸೇರಿದಂತೆ 8 ಕಾಮಗಾರಿಗಳಿಗೆ ವೇಗ ನೀಡಿ ಕಾಲಮಿತಿಯಲ್ಲಿ ಪುರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರು ಪೂರೈಸಿ
ಕಲಬುರಗಿ ನಗರಕ್ಕೆ ಶೇ.100ರಷ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಪಾಲಿಕೆ, ಕೆ.ಯು.ಐ.ಡಿ.ಎಫ್​.ಸಿ ಸಂಸ್ಥೆಯ ಆದ್ಯತೆಯಾಗಿರಬೇಕು. ನಗರಕ್ಕೆ ನೀರು ಪೂರೈಕೆ ಮಾಡುವ 102 ಎಂ.ಎಲ್​.ಡಿ. ನೀರು ಸಂಪೂರ್ಣ ಸಂಸ್ಕರಿಸಿದ ಬಳಿಕವೆ ಪೂರೈಸಬೇಕು. ಭೀಮಾ ನದಿಗೆ ಚರಂಡಿ ನೀರು ಸೇರದಂತೆ ಎಚ್ಚರ ವಹಿಸಿಬೇಕು ಎಂದರು.
ಪ್ರಸ್ತುತ ಬರ ಆವರಿಸಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಬೇಡಿಕೆ ಇದ್ದಲ್ಲಿ ಟ್ಯಾಂಕರ್​ ಮೂಲಕ ನೀರು ಪೂರೈಸಬೇಕು. ಅಗತ್ಯವಿದ್ದೆಡೆ ಕೊಳವೆ ಬಾವಿ ಕೊರೆಯಬೇಕು. ಬಾವಿ, ಬಾಡಿಗೆ ಕೊಳವೆಬಾವಿ ಮೂಲಕ ನೀರು ಪಡೆದು ಸಾರ್ವಜನಿಕರಿಗೆ ಒದಗಿಸಬೇಕು ಎಂದರು.
ಕುಂದುಕೊರತೆ ಆಲಿಸಿ
ನಗರದ ನಿವಾಸಿಗಳಿಗೆ ಇ&ಖಾತಾ ಸೇರಿದಂತೆ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯವಾಗಬಾರದು. ಸಾರ್ವಜನಿಕರನ್ನು ಕಚೇರಿಗೆ ಅನಗತ್ಯ ಅಲೆದಾಡಿಸಬಾರದು. ನಿವಾಸಿಗಳು ಮೂಲಸೌಕರ್ಯ ಕೊರತೆ, ಸೇವೆಯಲ್ಲಿ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಅವರ ಕುಂದುಕೊರತೆ, ದೂರು ಆಲಿಸಲು ವ್ಯವಸ್ಥೆ ಮಾಡಬೇಕು. ಯಾವ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿದಲ್ಲಿ ಸರ್ಕಾರ ಇನ್ನೂ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲಿಸಿದ ಸಚಿವರು, ಪ್ರಾಧಿಕಾರದ ಸಭೆ ಮಾಸಿಕವಾಗಿ ಕರೆದು ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಹಾಗರಗಾ, ಕುಸನೂರು, ಅಟಲ್​ ಬಿಹಾರಿ ವಾಜಪೇಯಿ ಬಡಾವಣೆ ವಸತಿ ಯೋಜನೆಗಳು ಸೇರಿ ಬಾಕಿ ಇರುವ ಸಿ.ಎ, ಮೂಲೆ ನಿವೇಶನ ಹರಾಜು ಮಾಡಬೇಕು ಎಂದರು.
ಪ್ರಾಧಿಕಾರದ ಆಯುಕ್ತ ಶೈಲೇಂದ್ರಸಿಂಗ್​ ಮಾತನಾಡಿ, ಪ್ರಾಧಿಕಾರಕ್ಕೆ ಮಂಜೂರಾದ 41 ಹುದ್ದೆಗಳ ಪೈಕಿ ಪ್ರಸ್ತುತ 11 ಹುದ್ದೆ ಮಾತ್ರ ಭರ್ತಿಯಾಗಿದ್ದರಿಂದ ದೈನಂದಿನ ಆಡಳಿತ ಮತ್ತು ಟೆಂಡರ್​ ಪ್ರಕ್ರಿಯೆ ನಡೆಸಲು ಕಷ್ಟವಾಗುತ್ತಿದೆ. ಹುದ್ದೆ ಭರ್ತಿಗೆ ಕ್ರಮ ವಹಿಸಬೇಕು. 25 ಲಕ್ಷ ಮೇಲ್ಪಟ್ಟ ಯೋಜನೆಗೆ ಸರ್ಕಾರದ ಹಂತದಲ್ಲಿ ತ್ವರಿತಗತಿಯಲ್ಲಿ ಅನುನೋದನೆ ಸಿಕ್ಕಲ್ಲ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್​ ಆಲಂ ಖಾನ್​, ಕಲಬುರಗಿ ಮಹಾನಗರ ಪಾಲಿಕೆ ಮೇಯರ್​ ವರ್ಷಾ ಜಾನೆ, ಉಪ ಮೇಯರ್​ ತೃಪ್ತಿ ಲಾಖೆ, ಸಾರ್ವಜನಿಕ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯೆ ಅನುಪಮಾ ಕಮಕನೂರ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಯಾಜ್​ ಖಾನ್​, ಪಾಲಿಕೆ ಸದಸ್ಯೆ ರೇಣುಕಾ, ಕೆ.ಯು.ಐ.ಡಿ.ಎಫ್​.ಸಿ ಅಧೀಕ್ಷಕ ಅಭಿಯಂತರ ಆರ್​.ಪಿ.ಜಾಧವ್​ ಇತರರಿದ್ದರು.
"

ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ನಗರದ 55 ವಾರ್ಡುಗಳಲ್ಲಿ 62,767 ಪೈಕಿ 30,907 ಮನೆಗೆ ಮಾತ್ರ ನಲ್ಲಿ ಸಂಪರ್ಕ ಕಲ್ಪಿಸಿದ್ದು, 31,860 ಬಾಕಿ ಇವೆ. ಉಳಿದ ಮನೆಗಳಿಗೂ ಬೇಗ ಸಂಪರ್ಕ ಕಲ್ಪಿಸಬೇಕಿದೆ. ಇನ್ನು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಳಪೆ ಕಾಮಗಾರಿಗೆ ಅವಕಾಶ ಇಲ್ಲ.

— ಡಾ.ಯತೀಂದ್ರ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರು.