ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ನಾಯಕತ್ವ ಸೇರಿದಂತೆ ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ DK ಶಿವಕುಮಾರ್ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.ಸ್ಥಳೀಯ ಮಟ್ಟದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದಾಗ, "ಹಿರಿಯರು ಮಾರ್ಗದರ್ಶನ ನೀಡುತ್ತಾರೆ" ಎಂದರು.
ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ "ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ" ಎಂದರು. ಮುಖ್ಯಮಂತ್ರಿಯವರನ್ನು ಸಭೆಗೆ ಆಹ್ವಾನಿಸಲಾಗಿದೆಯಲ್ಲ ಎಂದು ಹೇಳಿದಾಗ, "ಇರಬಹುದು, ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ" ಎಂದು ತಿಳಿಸಿದರು.
ನಾನು ಲೈಫ್ ಟೈಮ್ ಕಾರ್ಯಕರ್ತ
ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ).
ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದಾಗ, "ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ" ಎಂದರು.