ರಾಯಚೂರಿನ ಕೃಷಿ ವಿವಿಯ ಮುಖ್ಯ ವೇದಿಕೆಯಲ್ಲಿ ಎಡೆದೊರೆ ನಾಡು ರಾಯಚೂರು ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ ಎಸ್. ತಂಗಡಗಿ, ಡಾ.ಶರಣ ಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಆರ್.ಬಸನಗೌಡ ತುರ್ವಿಹಾಳ, ಜಿ.ಟಿ.ಪಾಟೀಲ್, ಎಂಎಲ್ಸಿಗಳಾದ ಎ. ವಸಂತ ಕುಮಾರ, ಬಸನಗೌಡ ಬಾದರ್ಲಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹಮದ್, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಇದ್ದರು.
- ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾನ
- ರಾಯಚೂರು ಉತ್ಸವದ ಸಮಾರೋಪ
- ಉತ್ಸವದ ಸಮಾರೋಪದಲ್ಲಿ ರೈತರಿಗೆ ಭೂಮಿ ಗ್ಯಾರಂಟಿ ಭರವಸೆ
ರಾಚಯ್ಯಸ್ವಾಮಿ ಮಾಚನೂರು ರಾಯಚೂರು
ತುಂಗಭದ್ರಾ ಅಣೆಕಟ್ಟಿನ 30 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿರುವುದನ್ನು ತಪ್ಪಿಸಲು ಈ ಭಾಗದ ನಾಯಕರು ನನ್ನ ಮೇಲೆ ಒತ್ತಡ ಹಾಕಿದ್ದು, ಇದಕ್ಕೆ ಬದ್ಧನಾಗಿದ್ದೇನೆ. ಆದರೆ ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ನನಗೆ ಸಮಯಾವಕಾಶ ನೀಡುತ್ತಿಲ್ಲ. ಅವರು ನಮಗೆ ಅವಕಾಶ ಕೊಟ್ಟರೆ ಪೋಲಾಗುತ್ತಿರುವ 30 ಟಿಎಂಸಿ ತುಂಗಭದ್ರಾ ನೀರನ್ನು ನಿಲ್ಲಿಸಿ, ಈ ಭಾಗದ ರೈತರು, ಜನರಿಗೆ ನ್ಯಾಯ ಒದಗಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ರಾಯಚೂರು ಜಿಲ್ಲಾ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ನಿಮ್ಮ ಜಿಲ್ಲೆಯ ಶಾಸಕರು ನನ್ನ ಮೇಲೆ ಒತ್ತಡ ತಂದು, ಕಾಲುವೆಗಳ ಕೊನೆಯ ಭಾಗದವರೆಗೂ ನೀರು ಹರಿಯುವಂತೆ ಮಾಡಲು ಕಾನೂನು ತರುವಂತೆ ಮಾಡಿದರು.
ಕಾಲುವೆಗಳ ಮೇಲ್ಭಾಗದಲ್ಲಿ ನೀರೆತ್ತುವ ಮೂಲಕ ಕೊನೆಯ ಭಾಗದವರೆಗೆ ನೀರು ತಲುಪುತ್ತಿರಲಿಲ್ಲ. ಹೀಗಾಗಿ ನಾವು ಹೊಸ ಕಾನೂನು ತಂದಿದ್ದೇವೆ. ಕಳೆದ ಬಾರಿ ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ. ಬಂಗಾರಪ್ಪನವರ ಕೆರೆಗೆ (ಗಣೇಕಲ್ ಸಮತೋಲನ ಜಲಾಶಯ) 300 ಕೋಟಿ ನೀಡಿದ್ದು ಆ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಟಿಬಿ ಅಣೆಕಟ್ಟಿನ ಎಲ್ಲ ಗೇಟ್‌ಗಳನ್ನು ಬದಲಾಯಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ನಾವು ಇನ್ನು ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮಧ್ಯಾಹ್ನ ಬಿಸಿಯೂಟ, ಮನರೇಗಾ, ಸ್ತ್ರೀಶಕ್ತಿ ಕಾರ್ಯಕ್ರಮಗಳನ್ನು ಈ ಭಾಗದಿಂದಲೇ ನಾವು ಆರಂಭಿಸಿದೆವು. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೋರಾಟ ಮಾಡಿ ನಿಮ್ಮಲ್ಲರ ಅಭಿವೃದ್ಧಿಗೆ 371ಜೆ ಜಾರಿಗೆ ತಂದು ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಹೀಗಾಗಿ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಸ್ಮರಿಸುವಂತೆ ಈ ಭಾಗದ ಜನ ಖರ್ಗೆ ಅವರನ್ನು ಸ್ಮರಿಸಬೇಕು ಎಂದರು.
ರಾಯಚೂರು ಉತ್ಸವ ನಮ್ಮೆಲ್ಲರ ಹೆಮ್ಮೆ. ಕಲೆ, ಸಂಸ್ಕೃತಿ ಸಂಗಮವೇ ರಾಯಚೂರು ಉತ್ಸವ. ಎರಡು ದಶಕಗಳ ಬಳಿಕ ರಾಯಚೂರಿನಲ್ಲಿ ಈ ಉತ್ಸವ ನಡೆದಿದೆ. ಈ ನಾಡಿನ ನಾಡಿ, ಜನರ ಸೌಹಾರ್ದವನ್ನು ರಾಯಚೂರು ಜಿಲ್ಲೆಯಲ್ಲಿ ಕಾಣುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ ಲಕ್ಷಾಂತರ ಜನ ಈ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಂಡಿದ್ದೀರಿ. ಜನಪದವೇ ನಮ್ಮೆಲ್ಲರ ಗುರುತು. ಸಂಸ್ಕೃತಿ, ಕಲೆಯೇ ನಮ್ಮೆಲ್ಲರ ಶಕ್ತಿ. ನಿಮ್ಮನ್ನು ಸಂತೋಷವಾಗಿಡುವುದು ನಮ್ಮ ಸರ್ಕಾರದ ಗುರಿ ಎಂದರು.
ನಾನು ಚುನಾವಣೆ ಸಮಯದಲ್ಲಿ ಇಲ್ಲಿಗೆ ಬಂದಾಗ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂದು ಹೇಳಿದ್ದೆ. ಈ ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದಿದ್ದಕ್ಕೆ ಈ ಸಂತೋಷ ಬಂದಿದೆ. ರಾಯಚೂರು ನಾಡು, ಭತ್ತದ ಬೀಡು ನಮಗೆ ಶಕ್ತಿ ನೀಡುತ್ತಿದೆ.
ಆಭರಣದ ರೂಪ ಬೇರೆಯಾದರೂ ಅದನ್ನು ಮಾಡುವ ಚಿನ್ನ ಒಂದೇ ಆಗಿದೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾಯವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಇಲ್ಲಿ ನಾವು ಬೇರೆ ಬೇರೆ ಸಮುದಾಯದ ಜನ ಸೇರಿದ್ದೇವೆ. ಕಲೆಗಳು ಬೇರೆಯಾದರೂ ಕಲಾವಿದರೆಲ್ಲರೂ ಒಂದೇ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಆರ್.ಬಸನಗೌಡ ತುರ್ವಿಹಾಳ, ಜಿ.ಟಿ.ಪಾಟೀಲ್, ಎಂಎಲ್ಸಿಗಳಾದ ಎ. ವಸಂತ ಕುಮಾರ, ಬಸನಗೌಡ ಬಾದರ್ಲಿ,
ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್ ಅಹಮದ್, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಗ್ಯಾರಂಟಿ ಯೋಜನಾ ಅಧ್ಯಕ್ಷ ಪಾಮಯ್ಯ ಮುರಾರಿ, ತಾಲೂಕು ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ಕುಲಪತಿ ಡಾ.ಎಂ.ಹನುಮಂತಪ್ಪ, ಡಿಸಿ ನಿತೀಶ್ ಕೆ., ಜಿಪಂ ಸಿಇಒ ಈಶ್ವರ ಕುಮಾರ ಕಾಂದೊ, ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಎಸ್ಪಿ ಅರುಣಾಂಗ್ಷು ಗಿರಿ ಸೇರಿ ಅನೇಕರು ಇದ್ದರು.
ರಾಯಚೂರು ಜಿಲ್ಲೆಯ ಆಸ್ಪತ್ರೆ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಈ ಭಾಗದಲ್ಲಿ ಏಮ್ಸ್ ತರಬೇಕು ಎಂದು ಪಣ ತೊಟ್ಟಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಗ್ಯಾರಂಟಿಗಳ ಜೊತೆಗೆ ಸರ್ಕಾರವು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಸರ್ಕಾರ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.14ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ರಾಯಚೂರು ಜಿಲ್ಲೆ ಅನೇಕ ವಿಶೇಷತೆಗಳನ್ನು ಹೊಂದಿದೆ. ಎರಡು ದಶಕದ ನಂತರ ಉತ್ಸವ ಆಗಿದೆ. ಗಡಿ ಭಾಗದಲ್ಲಿ ಇಂದಿನಿಂದ ಪ್ರತಿ ವರ್ಷ ಉತ್ಸವ ಮಾಡಲಾಗುತ್ತದೆ. ಗಡಿ ಭಾಗದಲ್ಲಿ ಕನ್ನಡ ಉಳಿಸುವ ಕೆಲಸ ಆಗಬೇಕು. ಇಂದಿನ ಯುವ ಜನತೆಗೆ ಸಂಸ್ಕೃತಿ, ಸಂಸ್ಕಾರ ತಿಳಿಸುವ ಕೆಲಸ ಅಗಬೇಕು. ಈ ಭಾಗದಲ್ಲಿ ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿದ್ದಾರೆ. ಕಾಲುವೆಗಳನ್ನು ರಿಪೇರಿ ಮಾಡುತ್ತೇವೆಂದು ರೈತರನ್ನು ಒಪ್ಪಿಸಿದ್ದೇವೆ. ಮಾರ್ಚ್ ಒಳಗೆ ಜಲಾಶಯದ 10 ಗೇಟ್‌ಗಳನ್ನು ಅಳವಡಿಸುತ್ತೇವೆ. ರೈತರ ಬಹುದಿನಗಳ ನೀರಾವರಿ ಸಮಸ್ಯೆ ಬಗೆಹರಿಯಲಿದೆ.