ಸೇಡಂ ತಾಲೂಕಿನ ಕಾಚೂರದಲ್ಲಿ ನಿಮಾರ್ಣ ಹಂತದಲ್ಲಿರುವ ಕಾಗಿಣಾ ಏತ ನೀರಾವರಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಪರಿಶೀಲಿಸಿದರು. ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕ ಧನಶ್ರೀ, ಜಗದೇವ, ಮದನಿಕಾಂತ ಶೃಂಗೇರಿ ಇದ್ದರು. 
ರಾಜ್ಯ

ಅಪೂರ್ಣ ಮಾಹಿತಿಗೆ ಸಿಡಿದ ಡಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸೇಡಂ ತಾಲೂಕಿನ ವಿವಿಧೆಡೆ ಇಕ್ರಮ್​ ಶರೀಫ್​ ಭೇಟಿ
  • ನೀರಾವರಿ ಇಲಾಖೆ ಕಾಮಗಾರಿ ಪರಿಶೀಲನೆ ಜತೆ ರೈತರ ಗೋಳು ಆಲಿಕೆ
ಸೇಡಂ: ನಿಮ್ಮ ಇಲಾಖೆ ಉಸ್ತುವಾರಿಯಲ್ಲಿ ನಡೆದಿರುವ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲವೆಂದರೆ ನೀವು ಹೇಗೆ ಇದರ ಜವಾಬ್ದಾರಿ ನಿರ್ವಹಿಸುತ್ತೀರಿ ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೇಗಾಡಿದರು.
ಕಾಚೂರ ಗ್ರಾಮದಲ್ಲಿ ನಿಮಾರ್ಣ ಹಂತದಲ್ಲಿರುವ ಕಾಗಿಣಾ ಏತ ನೀರವಾರಿ ಯೋಜನೆ ಜಾಕ್​ವೆಲ್​ಗೆ ಮಂಗಳವಾರ ಭೇಟಿ ನೀಡಿದ ಅವರು, ಹತ್ತಾರು ಕೋಟಿ ಅನುದಾನದ ಕೆಲಸ ಬೆರಳಣಿಕೆಯಷ್ಟು ಕಾರ್ಮಿಕರಿಂದ ಮಾಡಿಸುತ್ತಿದ್ದೀರಿ. ಹೀಗಾರದೆ ಹತ್ತಾರು ವರ್ಷಗಳಾದರೂ ಮುಗಿಯಲ್ಲ. ಜತೆಗೆ ಹೇಗೆಲ್ಲ ರೈತರಿಗೆ ನೀರು ತಲುಪಿಸಲಾಗುತ್ತಿದೆ? ಇದರ ಸಂಪೂರ್ಣ ನೀಲಿನಕ್ಷೆ ಏನು ಎಂಬ ಮಾಹಿತಿ ಯಾರೊಬ್ಬರ ಬಳಿಯೂ ಪರಿಪೂರ್ಣವಾಗಿಲ್ಲ. ನೀವೆಲ್ಲ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸಣ್ಣ ನೀರಾವರಿ ಇಲಾಖೆ ಎಇಇ ಸೇರಿ ಸಂಬಂಧಿತ ಎಲ್ಲರಿಗೂ ನೋಟಿಸ್​ ನೀಡಿ ಎಂದು ಕಾರ್ಯನಿರ್ವಾಹಕ ಅಭಿಯಂತರ ಜಗದೇವ ಗುತ್ತೇದಾರ್​ ಅವರಿಗೆ ಸೂಚಿಸಿದ ಡಿಸಿ, ನಗರದಲ್ಲಿರುವ ಒಳ ಕ್ರೀಡಾಂಗಣಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಶೌಚಗೃಹಕ್ಕೆ ನೀರು ಒದಗಿಸುವ ಮೂಲಕ ಬಳಕೆಗೆ ಮುಕ್ತವಾಗಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದಕ್ಕೂ ಮುನ್ನ ನಗರದ ಹಳೆಯ ಬಡವಾಣೆಗಳ ಕೆಲ ಬೂತ್​ಗಳಿಗೆ ಭೇಟಿ ನೀಡಿ ಎಸ್​ಐಆರ್​ ಪ್ರಕ್ರಿಯೆ ಪರಿಶೀಲಿಸಿದರು. ನಗರಸಭೆ ಕಚೇರಿಗೆ ತೆರಳಿ ಜನರಿಗೆ ಒದಗಿಸುವ ಸೇವೆಗಳ ಮಾಹಿತಿ ಪಡೆದು ಜನಸಾಮಾನ್ಯರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಕೋಡ್ಲಾ&-ಕಲಕಂಭ ಮಧ್ಯದ ಜಮೀನೊಂದಕ್ಕೆ ಭೇಟಿ ನೀಡಿ ಬರ ಸ್ಥಿತಿ, ಬೆಳೆ ಹಾನಿ ಪರಿಶೀಲಿಸಿ ಸ್ಥಳದಲ್ಲಿದ್ದ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆ ಹಾಳಾಗಿವೆ ಸಾಹೇಬ್ರೆ, ಉದ್ದು ಬಿತ್ತನೆ ಮಾಡಬೇಕೆಂದರೂ ಮಳೆ ಇಲ್ಲದ್ದರಿಂದ ಕೈಬಿಟ್ಟಿದ್ದೇವೆ ಎಂದು ಕೃಷಿಕರು ಅಳಲು ತೋಡಿಕೊಂಡರು.
ಪ್ರೊಬೆಷನರಿ ಐಎಎಸ್​ ಅಧಿಕಾರಿ ಶಿಖರ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕ ಧನಶ್ರೀ, ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಎಇಇಗಳಾದ ಮದನಿಕಾಂತ ಶೃಂಗೇರಿ, ಪ್ರವಿಣ ಇತರರಿದ್ದರು.