ದಾಸ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪುರಕರ್​ ಮಾತನಾಡಿದರು. ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಸಂಗಣ್ಣ ಚೋರಗಸ್ತಿ, ಗಂಗಾಧರ, ಜಯಶ್ರೀ ಯಾದಗಿರಿ ಇತರರಿದ್ದರು. 
ರಾಜ್ಯ

ದಾಸ ಸಾಹಿತ್ಯ ಸಮ್ಮೇಳನ ಆ.2ರಂದು

ಪ್ರಮುಖ ಮುಖ್ಯಾಂಶಗಳು

  • ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಹಾಪುರಕರ್​ ಮಾಹಿತಿ
  • ಅರ್ಥಪೂರ್ಣ ಆಯೋಜನೆಗೆ ಸಿದ್ಧತೆ
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್​ ದಕ್ಷಿಣ ವಲಯದಿಂದ ಆ.2ರಂದು ನಗರದ ಕನ್ನಡ ಭವನದಲ್ಲಿ ಕಲಬುರಗಿ ವಿಭಾಗದ 4ನೇ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್​ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪುರಕರ್​ ಹೇಳಿದರು.
ಕನ್ನಡ ಭವನದಲ್ಲಿ ಗುರುವಾರ ಕರೆದಿದ್ದ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಹಿಂದಿನ ದಾಸ ಸಾಹಿತ್ಯ ಸಮ್ಮೇಳನಗಳು ಅರ್ಥಪೂರ್ಣವಾಗಿ ಜರುಗಿದ್ದು, ಹೊಸ ಪೀಳಿಗೆಗೆ ದಾಸ ಸಾಹಿತ್ಯದ ವೈಚಾರಿಕತೆ ಮತ್ತು ಶ್ರೀಮಂತ ಪರಂಪರೆ ಬಗ್ಗೆ ಅರಿವು ಮೂಡಿಸಲಾಗಿದೆ. ಈ ಸಲ ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ. ಇವುಗಳ ಹಿಂದೆ ಸಮಾಜ ಪರಿವರ್ತನೆಯ ಉದ್ದೇಶವಿತ್ತು. ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನ ಮೂಲಕ ಸಮಾಜ ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯ ಎತ್ತಿ ಹಿಡಿದಿದ್ದಾರೆ ಎಂದರು.
ಜಿಲ್ಲಾ ಘಟಕದ ಸರ್ವ ಸದಸ್ಯರ ಸಮಾವೇಶ ಸೆಪ್ಟೆಂಬರ್​ ಮೊದಲ ವಾರ ಆಯೋಜಿಸಲು ಚಿಂತನೆ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಸಲ ನಡೆಸಲು ಉದ್ದೇಶಿಸಿರುವ ಈ ಸಮಾವೇಶದಲ್ಲಿ ನಾಲ್ಕೂವರೆ ವರ್ಷಗಳಿಂದ ಈವರೆಗೆ ರೂಪಿಸಿದ ವಿವಿಧ ಕಾರ್ಯಕ್ರಮ, ಸಮ್ಮೇಳನಗಳ ಜತೆ ಖರ್ಚು-ವೆಚ್ಚದ ವಿವರ ನೀಡಲಾಗುವುದು. ಸಾರ್ವಜನಿಕವಾಗಿ ಕಾರ್ಯಕ್ರಮಗಳ ಜತೆಗೆ ಲೆಕ್ಕಪತ್ರದ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ದಣ ವಲಯ ಕಾರ್ಯದರ್ಶಿಗಳಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಸಂಗಣ್ಣ ಚೋರಗಸ್ತಿ, ಗಂಗಾಧರ, ಚಂದ್ರಕಾಂತ ಸೂರನ್​, ಜಯಶ್ರೀ ಯಾದಗಿರಿ, ಮಧುಸೂದನ ಚಿಂತನಪಳ್ಳಿ, ಶಿವಕುಮಾರ ಸಿ.ಎಚ್​. ಇತರರಿದ್ದರು.
"

ಶೀಘ್ರವೇ ದಾಸ ಸಾಹಿತಿಯೊಬ್ಬರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಜತೆ ಸ್ವಾಗತ ಸಮಿತಿ ರಚನೆ ಮಾಡಲಾಗುವುದು. ಒಟ್ಟಾರೆ ಸಮ್ಮೇಳನ ಅದ್ದೂರಿ ಮತ್ತು ಅರ್ಥಪೂರ್ಣ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.

— > ರವಿಕುಮಾರ ಶಹಾಪುರಕರ್​ ಅಧ್ಯಕ್ಷ, ಕಸಾಪ ದಕ್ಷಿಣ ವಲಯ ಕಲಬುರಗಿ