ಕಲಬುರಗಿಯ ದಾಸ ಸಾಹಿತ್ಯ ಸಾಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ಆಯೋಜಿಸಿದ್ದ ಶ್ರೀಪಾದರಾಜರ ಆರಾಧನಾ ನಿಮಿತ್ತ ದಾಸ ಸಾಹಿತ್ಯ ದಿನಾಚರಣೆ ಸಮಾರಂಭದಲ್ಲಿ ಡಾ.ಸ್ವಾಮಿರಾವ್ ಕುಲಕರ್ಣಿ, ಲಿಂಗರಾಜ ಅಪ್ಪ, ಡಾ.ಶ್ರೀನಿವಾಸ ಸಿರನೂರಕರ್, ವ್ಯಾಸರಾಜ ಸಂತೇಕೆಲ್ಲೂರ್, ಕೆ.ಪಿ.ಗಿರಿಧರ, ನಾರಾಯಣ ಕುಲಕರ್ಣಿ ಇತರರಿದ್ದರು.
- ಡಾ.ಮುದ್ದುಮೋಹನ್ಗೆ ಹರಿದಾಸ ಸಂಪದ ಪ್ರಶಸ್ತಿ
ಕಲಬುರಗಿ: ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಸಮ ಸಮಾಜ ಹಾಗು ಉತ್ತಮ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಅನಿವಾರ್ಯ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಹೇಳಿದರು.
ಕಲಬುರಗಿಯ ದಾಸ ಸಾಹಿತ್ಯ ಸಾಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ಆಯೋಜಿಸಿದ್ದ ದಾಸ ಸಾಹಿತ್ಯ ಪ್ರವರ್ತಕ ಶ್ರೀಪಾದರಾಜರ ಆರಾಧನಾ ನಿಮಿತ್ತ ದಾಸ ಸಾಹಿತ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಎಲ್ಲಾ ಪಾಲಕರು ಮಕ್ಕಳ ಮತ್ತು ಯುವಕರ ಮನಸ್ಸಿನಲ್ಲಿ ಮನೆಯಲ್ಲಿಯೇ ಒಳ್ಳೆಯ ವಿಚಾರ ತುಂಬ ಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಪ್ರತಿಷ್ಠಾನದ ಗೌರವಾಧ್ಯ ಡಾ.ಸ್ವಾಮಿರಾವ ಕುಲಕರ್ಣಿ, ದಾಸ ಸಾಹಿತ್ಯವು ಬದುಕಿನ ಸಾಹಿತ್ಯ, ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಕ ಎಂದು ಹೇಳಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ವ್ಯಾಸರಾಜ ಸಂತೆಕೆಲ್ಲೂರ ಅವರು ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಕುರಿತು ವಿಚಾರ ಮಂಡನೆ ಮಾಡಿದರು.
ಖ್ಯಾತ ಹಿಂದುಸ್ತಾನಿ ಸಂಗೀತಗಾರರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಮುದ್ದುಮೋಹನ ಅವರಿಗೆ ಹರಿದಾಸ ಸಂಪದ ರಾಜ್ಯ ಮಟ್ಟದ ಚೊಚ್ಚಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ, ಫಲಕದೊಂದಿಗೆ, ಹನ್ನೊಂದು ಸಾವಿರ ರೂ. ಸಂಭಾವನೆ ರೂಪದಲ್ಲಿ ನೀಡಲಾಯಿತು.
ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶಾಸ್ತ್ರಿಯ ಸಂಗೀತ, ಭಕ್ತೀಗಿತ ಗಾಯನ ಹಾಗು ಶಾಸಿಯ ನೃತ್ಯ ಕಾರ್ಯಕ್ರಮ ಪ್ರಸ್ತುತಗೊಂಡವು.
ಸೌಖ್ಯ ಕುಲಕರ್ಣಿ ಅವರ ನೂಪುರ ತಂಡದ ವಿದ್ಯಾರ್ಥಿನಿಯರು ಶ್ರೀಪಾದರಾಜರ ಕೀರ್ತನೆಗಳಿಗೆ ಭರತ ನಾಟ್ಯ ಪ್ರಸ್ತುತ ಪಡಿಸಿದರು. ಡಾ.ಮುದ್ದುಮೋಹನ ಅವರು ಹಿಂದುಸ್ತಾನಿ ಶಾಸ್ತ್ರಿಯ ಸಂಗೀತದ ಮೂಲಕ ಆರಂಭಿಸಿ, ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸುವ ಮೂಲಕ ನೆರೆದ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರರಾದರು.
ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಸುನಂದಾ ಸಾಲವಾಡಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ಡಾ.ಮುದ್ದುಮೋಹನ್ ಅವರನ್ನು ಪರಿಚಯಿಸಿದರು. ಕೆ.ಪಿ.ಗಿರಿಧರ ವಂದಿಸಿದರು. ಡಾ. ಸ್ವಾಮಿರಾವ ಕುಲಕರ್ಣಿ, ಶ್ರೀನಿವಾಸ ಸಿರನೂರಕರ, ಕೆ.ಪಿ. ಗಿರಿಧರ, ಅವಿನಾಶ ಕುಲಕರ್ಣಿ, ಡಾ. ಮುದ್ದುಮೋಹನ ಇತರರಿದ್ದರು.