ಚಿತ್ತಾಪುರದ ಹಜರತ್ ಚಿತ್ತಾಷಹಾವಲಿ ದರ್ಗಾ
- ಚಿತ್ತಾಪುರ ಹಜರತ್ ಚಿತ್ತಾಷಹಾವಲಿ
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದೂ ಮುಸ್ಲಿಂ ಭಾವೈಕ್ಯದ ಸೂಫಿ ಸಂತ ಹಜರತ್ ಚಿತ್ತಾಷಹಾವಲಿ ದರ್ಗಾದ 799ನೇ ಜಾತ್ರಾ ಮಹೋತ್ಸವ (ಉರುಸ್) ಮೇ 9ರಂದು ಪ್ರಾರಂಭವಾಗಲಿದೆ ಎಂದು ದರ್ಗಾದ ಮುತ್ತವಲ್ಲಿ ಸೈಯದ್ ಮಿನಾಜುದ್ದೀನ್ ಚಿಸ್ತಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 10ಕ್ಕೆ ನಾಗಣ್ಣ ಮಾಸ್ಟರ್ ಬಳ್ಳಾ ಮನೆಯಲ್ಲಿ ಗಲಾಫ್ ಫಾತೇಹಾ ಮೂಲಕ ಶುಭಾರಂಭಗೊಳ್ಳಲಿದೆ. ಅಪರಾಹ್ನ ಸೂಫಿ ಸಂತರ ಭಕ್ತರಾದ ಚೂರಿ, ಬಾಬುಳಗಿ, ಪಬ್ಬಣಿ, ವಸದ ಮನೆಯವರಿಂದ ವಿವಿಧ ಧಾನ್ಯಗಳನ್ನು ಜೋಳಿಗೆಯಲ್ಲಿ ತಂದು ಪೂಜೆ ಸಲ್ಲಿಸಿ ಚಿತ್ತಾಷಹಾವಲಿ ಕುಳಿತ ಸ್ಥಳ ಮತ್ತು ಗಲಾಫ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಲ್ದಿ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 9.30ಕ್ಕೆ ಬಳ್ಳಾ ಮನೆಯಿಂದ ಹೊರಡುವ ಗಲಾಫ್ ಮೆರವಣಿಗೆ ಮುತ್ತವಲ್ಲಿ ಮತ್ತು ಸಜ್ಜಾದೆ ಸೈಯದ್ ಮಿನಾಜುದ್ದೀನ್ ಚಿಸ್ತಿ ಮನೆ ತಲುಪಲಿದೆ. ಅಲ್ಲಿಂದ ರಾತ್ರಿ 10ಕ್ಕೆ ಸಂದಲ್ ಷರೀಫ್ ಫಾತೇಹಾ ಮೂಲಕ ಸಂದಲ್(ಗಂಧ) ಮೆರವಣಿಗೆ ಶುರುವಾಗಲಿದೆ. ಗಲಾಫ್ ಹೊತ್ತ ಕುದುರೆ, ದರ್ಗಾಕ್ಕೆ ಹೊದಿಸುವ ಚಾಂದನಿ ಹೊತ್ತ ಒಂಟೆಗಳು, ಶಹನಾಯಿ ಮತ್ತು ನಗಾರಿ ವಾದಕರು, ಮೌಲ್ವಿಗಳ ಭಕ್ತಿಗಾಯನ ಯುವಕರ ಸಾಹಸಮಯ ಮಲ್ಲಗಂಬ ಪ್ರದರ್ಶನ ಗಮನ ಸೆಳೆಯಲಿವೆ. ಗಂಧದ ಮೆರವಣಿಗೆ ದರ್ಗಾ ತಲುಪಿದ ಬಳಿಕ ಪೀರ್ ಖಾದ್ರಿ ಹಾಗೂ ಸೂಫಿ ಸಂತ ಹಜರತ್ ಚಿತ್ತಾಷಹಾವಲಿ ಸಮಾಧಿಗೆ ಪುಷ್ಪಾರ್ಪಣೆ ಜತೆ ಗಂಧಲೇಪನ ಮತ್ತು ಗಲಾಫ್ ಹೊದಿಕೆ, ಫಾತೇಹಾ ಅರ್ಪಿಸಲಾಗುತ್ತದೆ.
10ರಂದು ದೀಪೋತ್ಸವ (ಚಿರಾಗ್), ದರ್ಗಾ ಆವರಣದಲ್ಲಿ ರಾತ್ರಿ ಮಿರಾಮ್ (ಮಾಡಗಳಲ್ಲಿ) ಸಾವಿರಾರು ದೀಪಗಳು ಪ್ರಜ್ವಲಿಸತ್ತವೆ. 10ಕ್ಕೆ ಖ್ಯಾತ ಕಲಾವಿದರಿಂದ ಖವ್ವಾಲಿ ಮತ್ತು ಗೀಗೀ ಪದಗಳ ಸಂಭ್ರಮ ನಡೆಯಲಿದೆ.