ರಾಯಚೂರಿನಲ್ಲಿ ಸಿಎಚ್ ಪೌಡರ್ ಅಡ್ಡೆ ಮೇಲೆ ಪೊಲೀಸರು ಇತ್ತೀಚೆಗೆ ದಾಳಿ ಮಾಡಿದ್ದರು.
- ತೆಲಂಗಾಣ-ಆಂಧ್ರದಿಂದ ಸಿಎಚ್ ಪೌಡರ್ ಪೂರೈಕೆ
- ನಿರಂತರ ದಾಳಿ ನಡೆದರೂ ನಿಲ್ಲದ ದಂಧೆ
ರಾಯಚೂರು: ಒಂದೆಡೆ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ಅಕ್ರಮ ಸೇಂದಿ ದಂಧೆ ಸದ್ದಿಲ್ಲದೆ ನಡೆಯುತ್ತಿದೆ. ಪಕ್ಕದ ತೆಲಂಗಾಣ-ಆಂಧ್ರದಿಂದ ರೈಲುಗಳ ಮೂಲಕ ಅಪಾಯಕಾರಿ ಸಿಎಚ್ (ಕ್ಲೋರಲ್ ಹೈಡ್ರೇಟ್) ಪೌಡರ್ ಮಿಶ್ರಿತ ಸೇಂದಿ (ಹೆಂಡ) ತಂದು ನಗರ ಸೇರಿದಂತೆ ಜಿಲ್ಲಾದ್ಯಂತ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿದೆ.
ರಾಯಚೂರು ನಗರದ ಎಲ್ಬಿಎಸ್ ನಗರ, ಸಿಯಾತಲಾಬ್, ಹರಿಜನವಾಡ, ಮಡ್ಡಿಪೇಟೆ, ರಾಗಿಮಾನಗುಡ್ಡ, ಗದ್ವಾಲ್ ರಸ್ತೆ ಸೇರಿದಂತೆ ಅನೇಕ ಕೊಳೆಗೇರಿ ಬಡಾವಣೆಗಳಲ್ಲಿ ಯುವಕರು, ವೃದ್ಧರು ಕಲುಷಿತ ಸೇಂದಿ ಸೇವನೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಒಂದು ಲೀಟರ್ ಸೇಂದಿಗೆ 10 ರಿಂದ 30 ರೂ. ದರ ಇದೆ. ಕಡಿಮೆ ಹಣದಲ್ಲಿ ಸಿಗುತ್ತಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಮದ್ಯ ವ್ಯಸನಿಗಳು ಮುಗಿಬೀಳುತ್ತಿದ್ದಾರೆ.
ಸಿಎಚ್ ಪೌಡರ ಮಿಶ್ರಿತ ಸೇಂದಿ ಮಾರಾಟಗಾರರ ಜಾಲ ಬೇರೂರಿದ್ದು, ಜಿಲ್ಲಾ ಪೊಲೀಸ್ ಹಾಗೂ ಅಬಕಾರಿ ಇಲಾಖೆ ನಿತ್ಯ ಒಂದಿಲ್ಲೊಂದು ಪ್ರಕರಣ ದಾಖಲು ಮಾಡುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ.
ಎಲ್ಲೆಲ್ಲಿಂದ ಬರುತ್ತೆ ?: ಸಿಎಚ್ ಪೌಡರ್ ಹಾಗೂ ಸೇಂದಿ ಜಿಲ್ಲೆಗೆ ರೈಲು ಮಾರ್ಗ, ರಸ್ತೆ ಮಾರ್ಗದ ಮೂಲಕವೇ ಹೆಚ್ಚಾಗಿ ಪೂರೈಕೆಯಾಗುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸೇಂದಿ ಲೀಗಲ್ ಆಗಿ ನಡೆಯುತ್ತಿದೆ.
ಗಡಿ ಭಾಗಕ್ಕೆ ಬೈಕ್, ಆಟೋಗಳ ಮೂಲಕವೂ ಸೇಂದಿ ರಾಯಚೂರಿಗೆ ಕೆಲವರು ತಲುಪಿಸುತ್ತಾರೆ. ಅಲ್ಲಿಂದ ತರುವ ಸೇಂದಿಗೆ ನಿಷೇಧಿತ ಸಿಎಚ್ ಪೌಡರ್ ಮಿಕ್ಸೃ್ ಮಾಡಲಾಗುತ್ತದೆ. ಈ ಮೂಲಕ ಸೇಂದಿ ಪ್ರಮಾಣ ಹೆಚ್ಚಿಸಿ ಮದ್ಯ ವ್ಯಸನಕ್ಕೆ ದಾಸರಾಗಿರುವ ಕೂಲಿ ಕಾರ್ಮಿಕರು, ರೈತರು, ಗುಳೆ ಹೋಗುವ ಬಡ ಜನರನ್ನು ಸೆಳೆಯಲಾಗುತ್ತದೆ.
ಒಂದು ಕೆಜಿ ಸಿಎಚ್ ಪೌಡರ್‌ಗೆ ಎರಡೂವರೆಯಿಂದ ಮೂರು ಸಾವಿರ ರೂ. ಕೊಟ್ಟು ಆಂಧ್ರ, ತೆಲಂಗಾಣದಲ್ಲಿ ಖರೀದಿಸಲಾಗುತ್ತದೆ. ಒಂದು ಕೆಜಿ ಸಿಎಚ್ ಪೌಡರ್‌ನಿಂದ ಸುಮಾರು 3 ಸಾವಿರ ಲೀಟರ್‌ಗೂ ಹೆಚ್ಚು ಸೇಂದಿ ತಯಾರಿಸಬಹುದು. ಹೀಗಾಗಿ ನಿಷೇಧಿತ ಸಿಎಚ್ ಪೌಡರ್ ನಿಂದ ತಯಾರಿಸಲಾಗುವ ಸೇಂದಿ ದಂಧೆ ಅವ್ಯಾಹತವಾಗಿ ನಡೆದು, ದಂಧೆಕೋರರು ಲಾಭ ಮಾಡಿಕೊಳ್ಳುತ್ತಿದ್ದರೆ, ಜನರು ಅನಾರೋಗ್ಯಕ್ಕೆ ಒಳಗಾಗಿ ಸಂಕಷ್ಟ ತಂದುಕೊಳ್ಳುತ್ತಿದ್ದಾರೆ.
ಎಷ್ಟು ಪ್ರಕರಣ ದಾಖಲು?
ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಕ್ರಮ ಮದ್ಯ ಮಾರಾಟ, ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟಗಾರರ ಮೇಲೆ ರಾಯಚೂರು ಉಪ ವಿಭಾಗದ ಡಿವೈಎಸ್ಪಿ ಶಾಂತವೀರ ಈ. ನೇತೃತ್ವದಲ್ಲಿ ನಿರಂತರ ದಾಳಿ ಮಾಡಲಾಗುತ್ತಿದೆ. ಜ. 1 ರಿಂದ ಏ. 30ರವರೆಗೆ ಒಟ್ಟು 28 ಪ್ರಕರಣ ದಾಖಲಿಸಿ, 34 ಜನ ಆರೋಪಿಗಳಿಂದ 32200 ರೂ. ಮೊತ್ತದ 1315 ಲೀ. ಸೇಂದಿ ಜಪ್ತಿ ಮಾಡಲಾಗಿದೆ.
ಹನ್ನೆರಡು ಜನರ ಗಡಿಪಾರು
ಕಳೆದ ಎರಡು ವರ್ಷಗಳಲ್ಲಿ ಅಕ್ರಮ ಚಟುವಟಿಕೆಗಳಾದ ಕೊಲೆ, ಮಟ್ಕಾ ಜೂಜು, ಅಕ್ರಮ ಮರಳು ಸಾಗಣೆ, ಸೇದಿ ಮಾರಾಟ ಹಾಗೂ ಇತರ ಪ್ರಕರಣಗಳಲ್ಲಿ ಪದೇಪದೆ ಭಾಗಿಯಾದ ವಿವಿಧ ಠಾಣೆಗಳ 12 ಜನರನ್ನು ಜಿಲ್ಲಾಡಳಿತ ಗಡಿಪಾರು ಮಾಡಿದೆ. ರಾಯಚೂರಿನ ಪಶ್ಚಿಮ ಠಾಣೆ 1, ನೇತಾಜಿ ನಗರ ಠಾಣೆ 2, ಇಡಪನೂರು 5, ಯಾಪಲದಿನ್ನಿ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಹಾಗೂ ಅಬಕಾರಿ ಇಲಾಖೆಯಿಂದ ಇಬ್ಬರು ಸೇರಿ ಒಟ್ಟು 12 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಎಸ್ಪಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ರಾಯಚೂರು ಉಪ ವಿಭಾಗ ಸೇರಿ ಅನೇಕ ಕಡೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಅಡ್ಡೆಯ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಅಕ್ರಮ ತಡೆಗೆ ಪಕ್ಕದ ತೆಲಂಗಾಣ ರಾಜ್ಯ ಪೊಲೀಸ್ ಅಧಿಕಾರಿಗಳೊಂದಿಗೂ ಸಭೆ ನಡೆಸಿ ಚರ್ಚಿಸಲಾಗಿದೆ.
— ಶಾಂತವೀರ ಈ. ಡಿವೈಎಸ್ಪಿ, ರಾಯಚೂರು